ಕರ್ನಾಟಕ

karnataka

ETV Bharat / state

ಮನೆಯೊಳಗೆ ದಸರಾ ವೈಭವ: ಗೊಂಬೆಗಳ ಮೂಲಕ ನವರಾತ್ರಿ - ದಸರಾ ಆಚರಣೆ - Navratri dolls

ಬಿ.ಸಿ ರೋಡ್​​ನ ಪುಷ್ಪಾ ನಂದಕುಮಾರ್ ಪ್ರತೀ ವರ್ಷ ಗೊಂಬೆಗಳನ್ನಿಟ್ಟು ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಾರೆ.

Navratri celebration through dolls in Bantwala
ಗೊಂಬೆಗಳ ಮೂಲಕ ನವರಾತ್ರಿ

By ETV Bharat Karnataka Team

Published : Oct 17, 2023, 10:52 AM IST

Updated : Oct 17, 2023, 11:15 AM IST

ಮನೆಯೊಳಗೆ ದಸರಾ ವೈಭವ

ಬಂಟ್ವಾಳ (ದಕ್ಷಿಣ ಕನ್ನಡ): ದಸರಾ ಸಂದರ್ಭ ಕರಾವಳಿ ಜನತೆ ಮನೆಯಲ್ಲೇ ಬೊಂಬೆಗಳನ್ನಿಟ್ಟು ಪೂಜೆ ಮಾಡುವ ಪದ್ಧತಿ ವಿರಳ. ಆದರೆ ಬೆಂಗಳೂರು, ಮೈಸೂರು ಭಾಗಗಳ ಮನೆಗಳಲ್ಲಿ ಈ ಪದ್ಧತಿ ಇಂದಿಗೂ ಇದೆ. ಈ ಭಾಗದ ಹಲವರು ವೃತ್ತಿಜೀವನದ ನಿಮಿತ್ತ ಎಲ್ಲೇ ಹೋದರೂ ತಮ್ಮ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಬಿ.ಸಿ ರೋಡ್​​ನ ಕಿಂಗ್ಸ್ ಕೋರ್ಟ್ ಅಪಾರ್ಟ್​​​ಮೆಂಟ್​​ನಲ್ಲಿ ವಾಸವಾಗಿರುವ ಕೆ.ಎನ್.ಆರ್. ಕಂಪನಿಯ ಪಿಆರ್​ಓ ನಂದಕುಮಾರ್ ಅವರ ಪತ್ನಿ ಪುಷ್ಪಾ ನಂದಕುಮಾರ್ ಪ್ರತೀ ವರ್ಷವೂ ಬೊಂಬೆಗಳನ್ನಿಡುತ್ತಾರೆ.

ದಸರಾ ಕಾನ್ಸೆಪ್ಟ್ ಪ್ರಕಾರ ಗೊಂಬೆಗಳನ್ನು ಇಡುತ್ತಾರೆ. ಸಾವಿರಕ್ಕೆ ಸನಿಹದಷ್ಟು ಗೊಂಬೆಗಳು ಇವರ ಸಂಗ್ರಹದಲ್ಲಿವೆ. ಅವೆಲ್ಲವೂ ದಸರಾ ಸಂದರ್ಭ ಅಲಂಕಾರಗೊಳ್ಳುತ್ತವೆ. ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳೊಂದಿಗೆ ತಮ್ಮ ಮನೆಯಲ್ಲೇ ಗೊಂಬೆಗಳನ್ನು ಇಟ್ಟು ಸಂಭ್ರಮಿಸುತ್ತಾರೆ. ಮೂರು ವಿಭಾಗಗಳನ್ನಾಗಿಸಿ ಗೊಂಬೆಗಳನ್ನು ಇಡಲಾಗಿದೆ. ಮೊದಲನೇ ವಿಭಾಗದಲ್ಲಿ ದೇವದೇವತೆಯರ ದೃಶ್ಯ ವೈಭವವಿದ್ದರೆ, ಮತ್ತೊಂದರಲ್ಲಿ ದಸರಾ ಮೆರವಣಿಗೆ ಇದೆ. ಇನ್ನೊಂದರಲ್ಲಿ ಕೂಡುಕುಟುಂಬವೊಂದು ಒಟ್ಟಿಗೆ ಹಬ್ಬದೂಟವನ್ನು ಮಾಡುವ ದೃಶ್ಯವಿದೆ.

ಹಬ್ಬದ ಕಳೆ ಮೂಡಿಸುವ ದೇವರ ಗೊಂಬೆ: ತಮ್ಮ ಮನೆ ದೇವರು ಕೃಷ್ಣ, ವಿಘ್ನ ನಿವಾರಕ ಗಣಪತಿ, ವಿಷ್ಣುವಿನ ಹತ್ತು ಅವತಾರಗಳು, ಸಪ್ತಮಾತೃಕೆಯರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಗೊಂಬೆಗಳು, ರಾಮನ ಪಟ್ಟಾಭಿಷೇಕ ಕಾರ್ಯಕ್ರಮದ ವಾತಾವರಣ, ನೃತ್ಯಗಾತಿಯರ ಗೊಂಬೆಗಳು, ವೆಂಕಟರಮಣ, ಶ್ರೀದೇವಿ, ಭೂದೇವಿ, ಅಷ್ಟಲಕ್ಷ್ಮೀಯರು, ಗೌರಿ, ನವದುರ್ಗೆಯರ ಗೊಂಬೆಗಳು ಇಲ್ಲಿವೆ. ಪ್ರತಿದಿನ ನವದುರ್ಗೆಯ ಅವತಾರಗಳನ್ನು ಇಡಲಾಗುತ್ತದೆ. ಮಹಿಷಾಸುರನ ಗೊಂಬೆಯೂ ಇದೆ. ಚಾಮುಂಡಿ ಮಹಿಷನನ್ನು ಕೊಲ್ಲುವ ದೃಶ್ಯವೂ ಕಾಣಸಿಗುತ್ತದೆ. ಪಟ್ಟದ ಗೊಂಬೆ ಎಂದು ಹೇಳಲಾಗುವ ಮರದ ಗೊಂಬೆಗಳನ್ನು ಸಂಪ್ರದಾಯದ ಪ್ರಕಾರ ಇಡಲಾಗಿದೆ. ಅದರ ಅಕ್ಕಪಕ್ಕ ಲಕ್ಷ್ಮೀ ಸರಸ್ವತಿ ಗೊಂಬೆಗಳು ಇವೆ. ಇದರಲ್ಲಿ ಹಿಂದಿನ ಕಾಲದ ಮದುವೆ ಸಂಪ್ರದಾಯ, ತೊಟ್ಟಿಲು ಇರುವ ದೃಶ್ಯಗಳಿವೆ. ಶ್ರೀಕೃಷ್ಣ ವಿವಿಧ ಭಕ್ಷ್ಯಭೋಜನಗಳನ್ನು ಸವಿಯುವ ದೃಶ್ಯಗಳು ಇಲ್ಲಿವೆ. ಅಲ್ಲದೇ, ಸಂಗೀತಗಾರರು, ವಾದ್ಯಗೋಷ್ಠಿಯ ದೃಶ್ಯಗಳೂ ಇಲ್ಲಿದೆ.

ಕೂಡು ಕುಟುಂಬದ ಭೋಜನ: ಪುಷ್ಪಾ ನಂದಕುಮಾರ್ ಮನೆಯ ಊಟದ ಟೇಬಲ್ ಈಗ ಕೂಡುಕುಟುಂಬದ ಭೋಜನದ ದೃಶ್ಯಗಳನ್ನು ಒಳಗೊಂಡಿದೆ. ಇಲ್ಲಿರುವ ಕೌಟುಂಬಿಕ ವಾತಾವರಣದಲ್ಲಿ ಊಟ, ಅಡುಗೆಮನೆ, ಹಣ್ಣು, ತರಕಾರಿಗಳು, ಧವಸ ಧಾನ್ಯಗಳನ್ನು ಸಂಕೇತಿಸುವ ಬೊಂಬೆಗಳ ಚಿತ್ರಣ ಇಲ್ಲಿದೆ. ಈಗಿನ ಕಾಲದಲ್ಲಿ ಕುಟುಂಬದವರೆಲ್ಲರೂ ಒಟ್ಟಾಗಿ ಹಬ್ಬದಡುಗೆ ಮಾಡಿ ಊಟ ಮಾಡುವ ಪದ್ಧತಿ ಕಡಿಮೆ. ಹೀಗಾಗಿ ಇದನ್ನು ಜೋಡಿಸಿಡಲಾಗಿದೆ ಎಂದು ಪುಷ್ಪಾ ನಂದಕುಮಾರ್ ತಿಳಿಸಿದರು.

ಇದನ್ನೂ ಓದಿ:Andro Dreams: ಮಣಿಪುರಿಯ 'ಆ್ಯಂಡ್ರೋ ಡ್ರೀಮ್ಸ್'ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ

ಮನೆಯಲ್ಲೇ ದಸರಾ ಮೆರವಣಿಗೆ: ಮೈಸೂರು ದಸರಾ ಮೆರವಣಿಗೆ ನೋಡುವುದೇ ಕಣ್ಣಿಗೆ ಹಬ್ಬ. ಮೈಸೂರಿನವರಾದ ನಾವು ದಸರಾ ಸಂದರ್ಭ ಇಲ್ಲೇ ಗೊಂಬೆಗಳನ್ನು ಇಟ್ಟು ಮನೆಯಲ್ಲೇ ನವರಾತ್ರಿ ಆಚರಣೆ ಮಾಡುತ್ತೇವೆ. ಹೀಗಾಗಿ ಅದರ ದೃಶ್ಯವೈಭವವನ್ನು ಗೊಂಬೆಗಳ ಮೂಲಕ ಮೂಡಿಸಲಾಗಿದೆ. ಆನೆ, ಒಂಟೆ, ಕುದುರೆ ಸಾಲಿನೊಂದಿಗೆ ವಾಹನಗಳು, ಮೈಸೂರಿನ ಸಯ್ಯಾಜಿರಾವ್ ಸರ್ಕಲ್​ನಲ್ಲಿ ಸಾಗುತ್ತಿರುವ ದಸರಾ ಮೆರವಣಿಗೆಯ ದೃಶ್ಯ ಇಲ್ಲಿದೆ. ನವರಾತ್ರಿ ಸಂದರ್ಭ ಏನೇನು ನಡೆಯುತ್ತದೆ ಎಂಬುದನ್ನು ಬೊಂಬೆಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಕಾರ್ಯನಿಮಿತ್ತ ಹಲವಾರು ಪ್ರದೇಶಗಳಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ ಸಂಪ್ರದಾಯವನ್ನು ಬಿಟ್ಟಿಲ್ಲ ಎಂದು ಹೇಳುತ್ತಾರೆ ಪುಷ್ಪಾ ನಂದಕುಮಾರ್.

ಇದನ್ನೂ ಓದಿ:'ಪುನೀತ್ ರಾಜ್​ಕುಮಾರ್ ಮನೆ ಮನೆಯ ಮಗ, ಸ್ಮಾರಕ ಪುನರಾಭಿವೃದ್ಧಿಗೆ ಸರ್ಕಾರ ಸಾಥ್': ಸಿಎಂ ಸಿದ್ದರಾಮಯ್ಯ

Last Updated : Oct 17, 2023, 11:15 AM IST

ABOUT THE AUTHOR

...view details