ಸುಳ್ಯ: ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ದುರಂತಗಳು ಸಂಭವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಕಾರ್ಯಾಪಡೆ ರಚಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕಾರ್ಯನಿರ್ವಹಣೆ ಮಾಡಬೇಕು, ಅಧಿಕಾರಿಗಳು ರಜೆ ಮಾಡುವುದಿದ್ದರೆ ಮೊದಲೇ ತಿಳಿಸಬೇಕು ಎಂದು ಶಾಸಕ ಎಸ್.ಅಂಗಾರ ಹೇಳಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ಮತ್ತು ತುರ್ತುಪರಿಸ್ಥಿತಿ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿರುವ ಚರಂಡಿಗಳನ್ನು ನಗರ ಪಂಚಾಯತ್ ಕೂಡಲೇ ಸ್ವಚ್ಚ ಮಾಡುವ ಕೆಲಸ ಮಾಡಬೇಕು. ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಗಳ ಚರಂಡಿಗಳನ್ನು ಮಳೆನೀರು ಹರಿಯುವಂತೆ ಸರಿಪಡಿಸಬೇಕು. ರಸ್ತೆ ಮತ್ತು ಮನೆಗಳ ಹತ್ತಿರ ಇರುವ ಅಪಾಯಕಾರಿ ಮರಗಳ ತೆರವಿಗೆ ಸೂಚನೆ ನೀಡಿದರು.