ಬೆಳ್ತಂಗಡಿ:ಉಜಿರೆ ಎಸ್ಡಿಎಂ ಕಾಲೇಜಿನ ಹಳೇ ವಿದ್ಯಾರ್ಥಿನಿ ಹಾಗೂ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿ ಸಾಲಿಯತ್ (24) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದಿದ್ದಾರೆ. ಇವರು ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ. ವಿವಾಹವಾಗಿ ಒಂದು ವರ್ಷವಾಗಿತ್ತು. ಚಿಕ್ಕಮಗಳೂರಿನ ಪತಿಯ ಮನೆಯಲ್ಲಿ ವಾಸವಿದ್ದರು. ಹೃದ್ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ. ತಂದೆ, ತಾಯಿ, ಪತಿಯನ್ನು ಅಗಲಿದ್ದಾರೆ.
ರಾಷ್ಟ್ರಮಟ್ಟದ ಆಟಗಾರ್ತಿ:ಪಡಂಗಡಿಯಲ್ಲಿ ಪ್ರಾಥಮಿಕ, ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆ ಉಜಿರೆಯಲ್ಲಿ 9 ನೇ ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವಾಗ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿ ಪಡೆದ ಇವರು ಮುಂದೆ ಪ್ರೌಢ ಶಿಕ್ಷಣವನ್ನು ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪಡೆದು, ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್. ಅವರ ಗರಡಿಯಲ್ಲಿ ವಾಲಿಬಾಲ್ ಆಟದಲ್ಲಿ ಉತ್ತಮ ಪಟುವಾಗಿ ಬೆಳೆದರು.
ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿ ಕರ್ನಾಟಕ ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನ ತಂದುಕೊಟ್ಟಿದ್ದರು. ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್ಡಿಎಂ ಕಾಲೇಜು ಉಜಿರೆಯಲ್ಲಿ ಪಡೆದು ಇಲ್ಲಿಯೂ ಕರ್ನಾಟಕ ರಾಜ್ಯಕ್ಕೆ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿಯಾಗಿ ಜನಮನ್ನಣೆ ಗಳಿಸಿದ್ದರು. ಸಾಧನೆಯ ಹಿಂದೆ ತರಬೇತುದಾರರಾದ ಉಜಿರೆ ಎಸ್.ಡಿ.ಎಂ. ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಶ್ರಮವಿದೆ.
ವಾಲಿಬಾಲ್ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ನಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಟಗಾರ್ತಿಯನ್ನು ಪ್ರಶಂಸಿಸಿ ಗೌರವಿಸಿದ್ದರು.