ಪುತ್ತೂರು:ಶಾಸ್ತ್ರೀಯ ಕಲಾ ಪ್ರಕಾರಗಳು ಭಾರತೀಯ ಸಂಸ್ಕೃತಿಯ ಅಂತಃಸತ್ವಗಳಾಗಿದ್ದು, ಸಂಗೀತ, ಭರತನಾಟ್ಯ, ಗಮಕ, ಸುಗಮ ಸಂಗೀತ ಇತ್ಯಾದಿ ಕಲಾ ಪ್ರಕಾರಗಳಿಗೆ ಪ್ರಚಾರದ ಅಗತ್ಯವಿದೆ ಎಂದು ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಹೇಳಿದರು.
ಶುಕ್ರವಾರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕುರಿಗಾಹಿಯಾಗಿ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುತ್ತ ಹಾಡು ಹೇಳುತ್ತಿದ್ದ ಹನುಮಂತನಿಗೆ ಉತ್ತಮ ವೇದಿಕೆ ಸಿಕ್ಕಿದ ಪರಿಣಾಮ ಪ್ರಖ್ಯಾತ ಹಾಡುಗಾರನಾಗಿ ಇಂದು ಮೂಡಿ ಬಂದಿದ್ದಾನೆ. ಕಲಾವಿದರನ್ನು ಹುಡುಕಿ ಅವರಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನಿರಂತರವಾಗಿ ಮಾಡಬೇಕು. ಈ ಮೂಲಕ ಕಲಾ ಪ್ರಕಾರ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳು ಮೂಡಿ ಬರಲು ಅವಕಾಶ ನೀಡಬೇಕು ಎಂದು ಬೋರ್ಕರ್ ಹೇಳಿದರು.