ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ರಾಜ್ಯದಲ್ಲಿ 15 ವರ್ಷಗಳೊಳಗೆ ಅನುಷ್ಠಾನ ಮಾಡಲು ಸೂಚಿಸಿದೆ. ಆದರೆ ರಾಜ್ಯದಲ್ಲಿ 10 ವರ್ಷಗಳ ಒಳಗೆ ಅನುಷ್ಠಾನಗೊಳಿಸಲು ಗುರಿ ಇರಿಸಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಸಿ.ಎನ್. ಹೇಳಿದರು.
10 ವರ್ಷಗಳೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಗುರಿ ನಗರದ ಕೊಣಾಜೆಯಲ್ಲಿರುವ ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ರಾಜ್ಯದ ವಿವಿಗಳು ಎನ್ಇಪಿ ಅನುಷ್ಠಾನಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ನಡೆಸುತ್ತಿವೆ. ಇದಕ್ಕೆ ಬೇಕಾದ ಜಾಗೃತಿ ಹಾಗೂ ಸಹಕಾರವನ್ನು ಸರ್ಕಾರದ ಮಟ್ಟದಲ್ಲಿ ನೀಡಲಾಗುತ್ತಿದೆ. ಈ ಮೂಲಕ ವರ್ಷದೊಳಗೆ 10 ಸಾವಿರ ಪ್ರಾಧ್ಯಾಪಕರಿಗೆ ತರಬೇತಿಯನ್ನು ನೀಡುವ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಹಳ್ಳಿಯಿಂದ ದಿಲ್ಲಿವರೆಗೆ ಸಾಕಷ್ಟು ಜನರ ಸಲಹೆಗಳನ್ನು ಪಡೆದು ಎನ್ಇಪಿಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಮೂಲಕ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಕೌಶಲ್ಯತೆಯನ್ನು ಕಲಿಕೆಯ ಜೊತೆಜೊತೆಗೆ ಅಳವಡಿಸಲು ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಶಿಕ್ಷಣದ ರೀತಿ-ನೀತಿಗಳು, ಮೌಲ್ಯಮಾಪನ, ಪಠ್ಯಕ್ರಮಗಳಲ್ಲಿ ಸುಧಾರಣೆಗಳನ್ನು ಕಾಣಬೇಕಿದೆ. ಇದಕ್ಕೆ ಇನ್ನೂ ಹೆಚ್ಚಿನ ಆದ್ಯತೆಗಳನ್ನು ನಾವು ನೀಡಿಲ್ಲ. ಕಲಿಕೆಯಲ್ಲಿ ಆವಿಷ್ಕಾರಗಳಿಗೆ, ತಂತ್ರಜ್ಞಾನಗಳಿಗೆ ಎಷ್ಟು ಒತ್ತು ನೀಡಿದರೂ ಸಾಲುವುದಿಲ್ಲ. ಆದರೆ ಈ ಲೋಪಗಳ ಬಗ್ಗೆ ಸಕಾಲಿಕ ನಿರ್ಣಯ ಕೈಗೊಳ್ಳದ ಕಾರಣ ಸಮಾಜಕ್ಕೆ ದೊಡ್ಡಮಟ್ಟದ ನಷ್ಟ ಸಂಭವಿಸಿದೆ. ಇದೀಗ 34 ವರ್ಷಗಳ ಬಳಿಕ ಶಿಕ್ಷಣದಲ್ಲಿ ಹೊಸ ಬದಲಾವಣೆ ತರಲಾಗುತ್ತಿದೆ ಎಂದರು.
ಇದೆ ಸಂದರ್ಭದಲ್ಲಿ ಡಾ.ಅಶ್ವತ್ಥ್ ನಾರಾಯಣ ಅವರು ಮೂಡುಬಿದಿರೆಯ ಬನ್ನಡ್ಕದಲ್ಲಿ ಸ್ಥಾಪಿಸಲಾಗುವ ಮಂಗಳೂರು ವಿವಿಯ ನೂತನ ಘಟಕವನ್ನು ಉದ್ಘಾಟನೆ ಮಾಡಿದರು.