ಬಂಟ್ವಾಳ :ರಾಷ್ಟ್ರೀಯ ಹೆದ್ದಾರಿ 73ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಬಿ ಸಿ ರೋಡ್‌ನಿಂದ ಜಕ್ರಿಬೆಟ್ಟುವರೆಗಿನ ಭಾಗದಲ್ಲಿ ಜೂನ್ 26ರಿಂದ ಜುಲೈ 18ರವರೆಗೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 73 (ಹಳೆ ರಾಷ್ಟ್ರೀಯ ಹೆದ್ದಾರಿ 234) ಬಿ ಸಿ ರೋಡ್‌ನಿಂದ ಪುಂಜಾಲಕಟ್ಟೆವರೆಗೆ ಚತುಷ್ಪಥ ಮತ್ತು ದ್ವಿಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಪ್ರಥಮ ಹಂತದಲ್ಲಿ ಬಿ ಸಿ ರೋಡ್ ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್ ಕಾಮಗಾರಿ ರಸ್ತೆಯ ಒಂದು ಬದಿ 7 ಮೀಟರ್ ಅಗಲಕ್ಕೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 2.4 ಕಿ.ಮೀ ಆಗಲೇ ಮುಕ್ತಾಯಗೊಂಡಿದೆ. 1.5 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. 3.9 ಕಿ.ಮೀ ಕಾಂಕ್ರೀಟ್ ರಸ್ತೆಯ ಕ್ಯೂರಿಂಗ್ ಮಾಡಲು ಬಿ ಸಿ ರೋಡಿನಿಂದ ಜಕ್ರಿಬೆಟ್ಟುವರೆಗೆ ವಾಹನ ಸಂಚಾರ ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.
ಈ ಭಾಗದಲ್ಲಿ ಕಾಂಕ್ರೀಟೀಕರಣಗೊಳಿಸಲು ಜುಲೈ 18ರವರೆಗೆ ಒಟ್ಟು 31 ದಿನಗಳ ಅವಧಿಯಲ್ಲಿ ರಸ್ತೆ ಮೂಲಕ ವಾಹನ ಸಂಚಾರ ನಿಷೇಧಿಸಲು ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. ಮಂಗಳೂರು-ಪುಂಜಾಲಕಟ್ಟೆ ಕಡೆ ಓಡಾಡುವ ಲಘು ವಾಹನಗಳಾದ ಕಾರು, ಜೀಪು, ಮಿನಿ ವ್ಯಾನ್ ದ್ವಿಚಕ್ರ ವಾಹನ , ಆ್ಯಂಬುಲೆನ್ಸ್ ವಾಹನಗಳು ಬದಲಿ ರಸ್ತೆಯಾದ ಮಂಗಳೂರು, ಬಿ ಸಿ ರೋಡ್, ಬಂಟ್ವಾಳ ಪೇಟೆ- ಜಕ್ರಿಬೆಟ್ಟು ಬಳಸುವಂತೆ ಹಾಗೂ ಮೂಡುಬಿದ್ರೆ ಬಂಟ್ವಾಳ ಬಿ ಸಿ ರೋಡ್‌ಕಡೆಗೆ ಸಂಚರಿಸುವ ವಾಹನ ಬದಲಿ ರಸ್ತೆಯಾದ ಮೂಡುಬಿದ್ರೆ ಬಂಟ್ವಾಳ ಜಂಕ್ಷನ್ ರಾ. ಹೆ -234 ಮುಖಾಂತರ ಜಕ್ರಿಬೆಟ್ಟು - ಬಂಟ್ವಾಳ ಪೇಟೆ - ಬಿ ಸಿ ರೋಡ್ ಕಡೆಗೆ ಚಲಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ.
ಮಂಗಳೂರು-ಗುರುವಾಯನಕೆರೆ ಕಡೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ನಿತ್ಯ ಸಂಚರಿಸುವ ಸಾರ್ವಜನಿಕ ಬಸ್‌ಗಳಿಗೆ ರಾಷ್ಟ್ರೀಯ ಹೆದ್ದಾರಿ 234 ಬಳಸುವಂತೆ, ಅಂದರೆ ಮಂಗಳೂರು - ಬಿ ಸಿ ರೋಡ್ ಉಪ್ಪಿನಂಗಡಿ ಮುಖಾಂತರ ಕರಾಯ ಕಲ್ಲೇರಿ ಗುರುವಾಯನಕೆರೆ ಬದಲಿ ಮಾರ್ಗ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿಗೆ ಬರುವ ಬಸ್‌ಗಳು ಗುರುವಾಯನಕೆರೆ ಮುಖಾಂತರ ಕಲ್ಲೇರಿ - ಕರಾಯ ಉಪ್ಪಿನಂಗಡಿ ಮಾಣಿ ಬಿ ಸಿ ರೋಡ್ ಮಂಗಳೂರು ಬಳಸುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಟ್ಯಾಂಕರ್ಸ್, ಶಿಪ್‌ಕಾರ್ಗೋ ಕಂಟೇನರ್ಸ್, ಹೆವಿ ಕಮರ್ಷಿಯಲ್ ವೆಹಿಕಲ್, ಮಲ್ಟಿ ಎಕ್ಸೆಲ್ ಟ್ರಕ್ಸ್, ರಾಜಹಂಸ ಮುಂತಾದ ಘನ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.