ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ ಲಕ್ಷ್ಮೀ ಕಳೆದ ಜುಲೈ1ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು, ಮರಿಯಾನೆಯ ನಾಮಕರಣ ಸಮಾರಂಭ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ನಾಮಕರಣದ ವಿಧಿ ನೆರವೇರಿಸಿದರು. ಬಳಿಕ ಹೆಗ್ಗಡೆಯವರ ಮೊಮ್ಮಗಳು ಮಾನ್ಯ ಅವರು "ಶಿವಾನಿ" ಹೆಸರು ಉದ್ಘೋಶಿಸುವ ಮೂಲಕ ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಶ್ರೀಧಾಮ ಮಾಣಿಲದ ಸ್ವಾಮೀಜಿಯವರು ಆನೆಯ ಮಾವುತ ಕೃಷ್ಣರವರನ್ನು ಸನ್ಮಾನಿಸಿದರು.
ಧರ್ಮಸ್ಥಳದ ಮರಿಯಾನೆಗೆ ನಾಮಕರಣ ಈ ಕುರಿತು ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕ್ಷೇತ್ರದಲ್ಲಿ ನೂರಾರು ವರುಷಗಳಿಂದ ಗಜಸೇವೆ ನಡೆದುಕೊಂಡು ಬರುತ್ತಿದೆ. ಗಜಸೇವೆ ಎಂದರೆ ಅವುಗಳನ್ನು ಮಂಜುನಾಥ ಸ್ವಾಮಿಯ ಉತ್ಸವ ಮೆರವಣಿಗೆಗಳಿಗೆ ಅಲಂಕಾರ ಮಾಡಿ ಕರೆದುಕೊಂಡು ಹೋಗುವುದು ಸಂಪ್ರದಾಯ. ಈಗಾಗಲೇ ಕ್ಷೇತ್ರದಲ್ಲಿ ಲತಾ ಮತ್ತು ಲಕ್ಷ್ಮೀ ಎಂಬ ಎರಡು ಆನೆಗಳಿವೆ. ಇದೀಗ ಲಕ್ಷ್ಮೀಯು ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ. ಆ ಮರಿಗೆ ಇವತ್ತು ನಾಮಕರಣ ಕಾರ್ಯಕ್ರಮ ನಮ್ಮ ಕುಟುಂಬದವರಿಗೆಲ್ಲ ಅಲ್ಲದೆ ಧರ್ಮಸ್ಥಳದ ಎಲ್ಲರಿಗೂ ತುಂಬ ಸಂತೋಷವಾಗಿದೆ. ಶಿವನ ಆಶ್ರಯದಲ್ಲಿ ಇರುವುದರಿಂದ ಅವಳಿಗೆ "ಶಿವಾನಿ" ಎಂದು ನಾಮಕರಣ ಮಾಡಿದ್ದೇವೆ. ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ಅವಳ ಮೇಲಿರಲಿ, ಮಂಜುನಾಥ ಸ್ವಾಮಿಯ ಸೇವೆ ಮಾಡುವ ಭಾಗ್ಯ ಅವಳಿಗೆ ಕೂಡಿ ಬರಲಿ ಎಂದು ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಸೋನಿಯಾ ವರ್ಮಾ, ಅಮಿತ್, ಶ್ರದ್ಧಾ ಅಮಿತ್, ವೀರು ವಿ. ಶೆಟ್ಟಿ, ದೇವಳದ ಪಾರುಪತ್ಯಗಾರ ಪಿ. ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.