ಮಂಗಳೂರು: ಮೊಟ್ಟೆ, ಶಾಲೆಯ ಮಕ್ಕಳ ಊಟದ ಮೂಲಕ ಕಮೀಷನ್ ಪಡೆದ ಕಾಂಗ್ರೆಸ್ ಪಕ್ಷದವರು ದಾಖಲೆ ನೀಡದೆ ಇನ್ನೊಂದು ಸರ್ಕಾರವನ್ನು 40% ಸರ್ಕಾರವೆಂದು ಹೇಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40% ಕಮಿಷನ್ ಸರ್ಕಾರ ಎಂದು ಆರೋಪ ಮಾಡುವ ವಿಚಾರದಲ್ಲಿ ಸಾಕ್ಷಿಗಳು ಏನಿದೆ? ದಾಖಲೆಗಳು ಇದ್ದರೆ ಕೊಡಲಿ. ಜಯಮಾಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ಕೊಡಲು ಮೊಟ್ಟೆಯಲ್ಲಿ ಹಣ ಮಾಡಿದವರು. ಅದನ್ನು ಅವರು ಹೇಳಿರುವುದು ಮಾಧ್ಯಮದಲ್ಲಿ ಬಂದಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷ 80% ಸರ್ಕಾರವಾಗಿದ್ದು, ಅವರು ನೆರೆ ಸಂಗ್ರಹದ ಹಣವನ್ನೇ ಲೂಟಿ ಮಾಡಿದವರು. ಕಾಂಗ್ರೆಸ್ ನವರಿಗೆ ನೈತಿಕತೆ ಇದ್ದರೆ ಸಾಕ್ಷ್ಯ ಕೊಡಲಿ. ಕೆಂಪಣ್ಣ ಸುಮ್ಮನೆ ಮಾತನಾಡುವ ಬದಲು ದಾಖಲೆ ಬಹಿರಂಗಪಡಿಸಲಿ ಎಂದರು.