ಮಂಗಳೂರು: ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿರುವ ದ.ಕ.ಜಿಲ್ಲಾ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪರಿಶೀಲನೆ ನಡೆಸಿದರು. ನೂತನವಾಗಿ ಆರಂಭವಾಗುವ ಆಕ್ಸಿಜನ್ ಪ್ಲಾಂಟ್ನ ಕಾಮಗಾರಿ ವೀಕ್ಷಿಸಿದರು. ಬಳಿಕ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಬಗ್ಗೆ ವೆನ್ಲಾಕ್ ಡಿಎಂಒ ಡಾ.ಸದಶಿವರೊಂದಿಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲು, ಈ ಒಂದು ವರ್ಷದಲ್ಲಿ ವೆನ್ಲಾಕ್ ಆಸ್ಪತ್ರೆ ಹಾಗೂ ತಾಲೂಕಿನ ಆಸ್ಪತ್ರೆಗಳನ್ನು ಉನ್ನತೀಕರಿಸುವ ಕಾರ್ಯ ರಾಜ್ಯಸರ್ಕಾರ ಹಾಗೂ ಕೇಂದ್ರ ಸರಕಾರದಿಂದ ನಡೆದಿದೆ. ಯಾವುದೇ ರೀತಿಯ ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಮಂಗಳೂರಿನಲ್ಲಿ ಆಗಿಲ್ಲ. ಆದರೂ ಜನರ ಸಹಕಾರ ಬಹಳಷ್ಟು ಅಗತ್ಯವಿದೆ. ಕೋವಿಡ್ ಸೋಂಕು ಅತಿ ಹೆಚ್ಚು ವೇಗದಲ್ಲಿ ಹರಡುತ್ತಿರುವುದರಿಂದ ಜನರು ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಬೇಕು. ಆದ್ದರಿಂದ ಕಟ್ಟುನಿಟ್ಟಿನ ಲಾಕ್ ಡೌನ್ ನ ಅನಿವಾರ್ಯತೆ ಇದೆ. ಸರಕಾರ ಜಾರಿಗೊಳಿಸುತ್ತಿರುವ ನಿಯಮಗಳನ್ನು ಪಾಲಿಸಬೇಕಾಗಿರೋದು ಜನರ ಜವಾಬ್ದಾರಿ ಎಂದು ಹೇಳಿದರು.