ಮಂಗಳೂರು: ನಿನ್ನೆ ನಗರದಲ್ಲಿ ನಡೆದ ಬಿಜೆಪಿಯ ಬೂತ್ ವಿಜಯ ಅಭಿಯಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. 'ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ ಎಂಬ ಸಣ್ಣ ವಿಷಯದ ಬಗ್ಗೆ ಮಾತನಾಡಬೇಡಿ, ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಯಾಗಿರುವ ಲವ್ ಜಿಹಾದ್ ತಡೆಯಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು' ಎಂದು ಜನರ ಬಳಿ ಚರ್ಚೆಯಲ್ಲಿ ತೊಡಗುವಂತೆ ಕಾರ್ಯಕರ್ತರಿಗೆ ಕಟೀಲ್ ಕರೆ ಕೊಟ್ಟಿದ್ದಾರೆ.
ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ನಿಷೇಧ ಆಗದಿದ್ದರೆ ಬಿಜೆಪಿ ನಾಯಕರು ಬದುಕುಳಿಯುತ್ತಿರಲಿಲ್ಲ. ಅವರ ಫೋಟೋಗಳಿಗೆ ಹಾರ ಹಾಕಬೇಕಿತ್ತು. ಪಿಎಫ್ಐ ಹಾಗೂ ಕೆಎಫ್ಡಿ ನಿಷೇಧದ ಮೂಲಕ ರಾಷ್ಟ್ರಭಕ್ತರಿಗೆ ಒಳಿತಾಯಿತು. ಇದನ್ನು ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಇಲ್ಲದಿದ್ದರೆ ಹಿಂದೂಗಳ ಸರಣಿ ಹತ್ಯೆಗಳು ನಡೆಯುತ್ತಿತ್ತು ಎಂದರು.
2014 ರಿಂದ ದೇಶದಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿಲ್ಲ. ಅದಕ್ಕೆ ಒಂದೇ ಉತ್ತರ, ದೇಶದಲ್ಲಿ ಅಮಿತ್ ಶಾ ಮತ್ತು ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಎಂದರು. ಈ ಮೂಲಕ ಗೋಹತ್ಯೆ ನಿಷೇಧಿಸಿದ ಬಿಜೆಪಿ ಸರ್ಕಾರ ಲವ್ ಜಿಹಾದ್ ಕುರಿತಂತೆಯೂ ಕಾನೂನು ತರಲಿದೆ ಎಂದು ಹೇಳಿದರು.
ಇದನ್ನೂ ಓದಿ:ಮುಂದಿನ ಚುನಾವಣೆಗೂ ಮುಂಚೆ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ: ನಳಿನ್ ಕುಮಾರ್ ಕಟೀಲ್