ಮಂಗಳೂರು(ದಕ್ಷಿಣ ಕನ್ನಡ): ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಅನುಭವಿಸಲಿದ್ದಾರೆ. ಡಿ ಕೆ ಶಿವಕುಮಾರ್ ಕ್ಷೇತ್ರ ಗೆಲ್ಲುವ ಟೆನ್ಷನ್ನಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಹಿಂದೆ ಪರಮೇಶ್ವರ್, ಖರ್ಗೆ ಅವರನ್ನು ಸೋಲಿಸಿದವರು ಇದೀಗ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ನ್ನು ಸೋಲಿಸಲು ತಯಾರಾಗಿದ್ದಾರೆ ಎಂದರು.
ಚುನಾವಣಾ ಕಾವು ರಾಜ್ಯದಲ್ಲಿ ಏರುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ 224 ಕ್ಷೇತ್ರ ದರ್ಶನ ಮಾಡಿದ್ದೇನೆ. ಪಕ್ಷ ಒಂದೂವರೆ ವರ್ಷದಿಂದ ತಯಾರಿ ಮಾಡಲಾಗಿತ್ತು. ಪೇಜ್ ಪ್ರಮುಖರ ತಯಾರಿ, ಯಾತ್ರೆಯ ಮೂಲಕ ಚುನಾವಣಾ ಕಾರ್ಯಮಾಡಲಾಗಿತ್ತು. ಚುನಾವಣೆ ಘೋಷಣೆ ಮುಂಚೆಯೇ ಪ್ರಧಾನ ಮಂತ್ರಿಗಳು 16 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಚುನಾವಣಾ ಘೋಷಣೆ ಬಳಿಕ 20 ಸಲ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿ ಬಹುಮತದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನರ ಅಭೂತಪೂರ್ವ ಬೆಂಬಲ ಪಕ್ಷಕ್ಕೆ ಸಿಕ್ಕಿದೆ. ಡಬಲ್ ಇಂಜಿನ್ ಸಾಧನೆ ಜನಸಾಮಾನ್ಯರಿಗೆ ತಲುಪಿದೆ. ಸಮಾಜಕಲ್ಯಾಣ ಯೋಜನೆ ಮನೆ ಮನೆಗೆ ತಲುಪಿದೆ. ಮೂಲ ಸೌಕರ್ಯ ಮನೆಮನೆ ತಲುಪಿದೆ. ಮೈಸೂರು ಭಾಗದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಸ್ಥಾನ ಪಡೆಯುತ್ತೇವೆ. ರಾಜ್ಯದಲ್ಲಿ ಬಿಜೆಪಿಯ ಪೂರ್ಣ ಬಹುಮತ ಸರಕಾರ ಬರಲಿದೆ ಎಂದರು.
ಪ್ರಧಾನಮಂತ್ರಿ ಮಾಡಿದ ರೋಡ್ ಶೋಗೆ ಜನರು ಬೆಂಬಲ ದೊರಕಿದ್ದು, ರಾಜ್ಯದಲ್ಲಿ ಬಿಜೆಪಿ ಪರ ಅಲೆ, ಕಾಂಗ್ರೆಸ್ ವಿರೋಧಿ ಅಲೆ ಇದೆ. ಜನ ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲ ಸಮುದಾಯಗಳು ನಮ್ಮ ಪಾರ್ಟಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಕಳೆದ 15 ದಿನದಲ್ಲಿ ಪ್ರಚಾರಕ್ಕೆ ವೇಗ ಸಿಕ್ಕಿದೆ. ಮೋದಿ, ನಡ್ಡಾ, ಅಮಿತ್ ಶಾ ಬಂದಾಗ ಜನಸಾಗರವೆ ಹರಿದುಬಂದಿದೆ. ಪ್ರಧಾನಮಂತ್ರಿ ರೋಡ್ ಶೋವಿನಿಂದ 15 ಸ್ಥಾನ ಹೆಚ್ಚಳವಾಗಲಿದೆ ಎಂದರು.