ನಿನ್ನೆಯ ಬಜೆಟ್ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪ್ರತಿಕ್ರಿಯೆ ಮಂಗಳೂರು(ದಕ್ಷಿಣ ಕನ್ನಡ):ರಾಜ್ಯ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ನಾಯಕರು ಕಿವಿಗೆ ಹೂವಿಟ್ಟು ಕೊಂಡು ಬಂದಿರುವುದಕ್ಕೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಜನರನ್ನು ಮರುಳು ಮಾಡಿ ಮಂಕುಬೂದಿ ಎರಚಿ, ಹೂವಿಟ್ಟೇ ದಿನದೂಡಿದ್ದಾರೆ. ಅವರಿನ್ನು ಶಾಶ್ವತವಾಗಿ ಕಿವಿಯಲ್ಲಿ ಹೂವಿಟ್ಟು ತಿರುಗಬೇಕು ಎಂದು ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇಂದು(ನಿನ್ನೆ) ಸಿಎಂ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಸರ್ವತೋಮುಖ ಅಭಿವೃದ್ಧಿಯ ಪೂರಕ ಬಜೆಟ್ ಆಗಿದೆ. ಇದು ಕೃಷಿಕರು, ಮಹಿಳೆಯರು, ಮತ್ತು ಯುವಕರ ಪರವಾದ ಬಜೆಟ್. ಇಂದು(ನಿನ್ನೆ) ಮೂರು ಲಕ್ಷ ಕೋಟಿಗೂ ಅಧಿಕವಾಗಿರುವ ಬಜೆಟ್ ಮಂಡನೆಯಾಗಿದೆ. ಇದು ಕೃಷಿಕನ ಕನಸಿನ ಬಜೆಟ್ ಆಗಿದೆ. ಐದು ಲಕ್ಷ ರೂ.ವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಘೋಷಣೆಯಾಗಿದೆ. ಅಡಕೆ ಹಳದಿ, ಚುಕ್ಕಿ ರೋಗ ಸಂಶೋಧನೆಗೆ ಹತ್ತು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಮ್ಕಿ, ಕಾನ, ಬಾಳ ಸಮಸ್ಯೆಗಳನ್ನು ಉಪ ಸಮಿತಿಗೆ ಒಪ್ಪಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ, ಪದವಿ ಪಡೆದವರಿಗೆ ಎರಡು ಸಾವಿರ ರೂ. ನೀಡುವ ಯೋಜನೆಯನ್ನು ಘೋಷಿಸಲಾಗಿದೆ ಎಂದರು.
ಹಳ್ಳಿಯ ಯುವಕರಿಗೆ ವಿವೇಕಾನಂದರ ಹೆಸರಿನಲ್ಲಿ ಸಾಲ ಯೋಜನೆ, ಸ್ವಯಂ ಉದ್ಯೋಗಕ್ಕೆ ಅವಕಾಶವನ್ನು ನೀಡಲಾಗಿದೆ. ಭೂ ರಹಿತ ಮಹಿಳೆಯರಿಗೆ 500 ರೂ., ಸ್ವಸಹಾಯ ಸಂಘಕ್ಕೆ ಸಾಲ ಯೋಜನೆ, ಸ್ತ್ರೀ ಸಬಲೀಕರಣಕ್ಕೆ ಶಕ್ತಿ ತುಂಬುವ ಕಾರ್ಯ ಬಜೆಟ್ನಲ್ಲಿ ನಡೆದಿದೆ. ಆದ್ದರಿಂದ ಇದು ಜನಪರ ಮತ್ತು ಜನಸಾಮಾನ್ಯರ ಪರವಾದ ಬಜೆಟ್ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಸತಿ ಯೋಜನೆ, ಮನೆ ಇಲ್ಲದವರಿಗೆ ಮನೆ ನೀಡುವ, ಶಿಕ್ಷಣ, ಉದ್ಯೋಗಕ್ಕೆ ಪೂರಕವಾದ ಯೋಜನೆಗಳನ್ನು ಈ ಬಜೆಟ್ ನಲ್ಲಿ ಹಾಕಲಾಗಿದೆ. ಆರೋಗ್ಯದಲ್ಲಿ ಪರಿವರ್ತನೆ ತರುವ ಕಾರ್ಯವನ್ನು ಸರ್ಕಾರ ಮಾಡಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಮಂಡನೆ ಮಾಡಿದ್ದಾರೆ. ದ.ಕ.ಜಿಲ್ಲೆಗೆ ಗುರುಪುರ ನೇತ್ರಾವತಿ ನದಿಗೆ ಬಾರ್ಜ್ ಜೋಡನೆ ಬಜೆಟ್ ನಲ್ಲಿ ಮಾಡಲಾಗಿದೆ ಎಂದರು.
ಶಾಫಿ ಬೆಳ್ಳಾರೆಗೆ ಟಿಕೆಟ್ ವಿಚಾರ:ಪಿಎಫ್ಐ ಹಾಗೂ ಎಸ್ ಡಿಪಿಐಗೆ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ, ಜೈಲಿನಲ್ಲಿರುವ ಶಾಫಿ ಬೆಳ್ಳಾರೆಗೆ ಎಸ್ ಡಿಪಿಐ ಚುನಾವಣೆಗೆ ಟಿಕೆಟ್ ಕೊಡುವ ಮೂಲಕ ಪಿಎಫ್ಐ ಎಸ್ ಡಿಪಿಐನ ಇನ್ನೊಂದು ಮುಖ ಎನ್ನುವುದು ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವದ ದೇಶದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ, ಜೈಲಿನಲ್ಲಿರುವವನಿಗೆ, ನಿಷೇಧಿತ ಪಿಎಫ್ಐ ಸಂಘಟನಾ ಸದಸ್ಯನನ್ನು ವ್ಯಕ್ತಿಯನ್ನು ಚುನಾವಣಾ ಕಣಕ್ಕಿಳಿಸುತ್ತಿರುವುದು ಸರಿಯಲ್ಲ. ಇದನ್ನು ನಾನು ವಿರೋಧಿಸುತ್ತೇನೆ. ಹಾಗೆಯೇ ಇದನ್ನು ಗೃಹ ಸಚಿವಾಲಯಕ್ಕೆ ತಿಳಿಸುತ್ತೇವೆ. ಇದರ ಬಗ್ಗೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಪ್ರಶ್ನಿಸಿದರು.
ಇದೊಂದು ಸಾಲದ ಬಜೆಟ್- ಕಾಂಗ್ರೆಸ್:ರಾಜ್ಯ ಬಜೆಟ್ ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು 2023-24ನೇ ಸಾಲಿನ ಬಜೆಟ್ ಬಿಜೆಪಿಯ ವಿದಾಯ ಭಾಷಣ. ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪತ್ರ. ರಾಜ್ಯದ ಒಟ್ಟು ಸಾಲ 3 ಲಕ್ಷ 22 ಸಾವಿರ ಕೋಟಿ ದಾಟಿದೆ. ಇದೊಂದು ಸಾಲದ ಬಜೆಟ್. ಗ್ರಾಮೀಣ ಭಾಗದ ಬಡಜನತೆಗೆ ಎಲ್ಲಿಗೂ ಸಾಲದ ಬಜೆಟ್. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾಜ್ಯದ ಜನತೆಯ ಕಿವಿಗೆ ಹೂ ಮುಡಿಸಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಾಂಗ್ರೆಸ್ನವರು ಕಿವಿಗೆ ಚೆಂಡು ಹೂವು ಇಟ್ಟುಕೊಂಡು ಓಡಾಡಬೇಕು : ಸಿ ಟಿ ರವಿ