ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಅವರ ಹಾಗೂ ಅವರ ಪತ್ನಿ ಶ್ರೀದೇವಿ ಬಳಿ ಒಟ್ಟು 1.45 ಕೋಟಿ ರೂ. ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ನಳಿನ್ ಕುಮಾರ್ ಐದು ವರ್ಷಗಳ ಹಿಂದೆ 1.06 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರು. 5 ವರ್ಷಗಳ ನಂತರ ಅವರ ಆಸ್ತಿ ಮೌಲ್ಯ 39 ಲಕ್ಷ ರೂ. ಹೆಚ್ಚಾಗಿದೆ. ನಳಿನ್ ಕುಮಾರ್ 60,000 ರೂ. ನಗದು ಹಾಗೂ ವಿವಿಧ ಬ್ಯಾಂಕ್ಗಳ ಉಳಿತಾಯ ಖಾತೆಯಲ್ಲಿ 4.94 ಲಕ್ಷ ರೂಪಾಯಿ ಹೊಂದಿದ್ದಾರೆ. ಅವರ ಪತ್ನಿ ಶ್ರೀದೇವಿ 22,000 ನಗದು ಹಾಗೂ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ 35,000 ರೂ. ನಗದು ಹೊಂದಿದ್ದಾರೆ. ಅವರ ಇಬ್ಬರು ಪುತ್ರಿಯರ ಖಾತೆಯಲ್ಲಿ ತಲಾ 15,633 ರೂ. ಇದೆ. ಐದು ವರ್ಷಗಳ ಹಿಂದೆ ನಳಿನ್ ಪತ್ನಿ ಶ್ರೀದೇವಿ 13.93 ಲಕ್ಷ ರೂ. ಸಾಲ ಹೊಂದಿದ್ದು, ಈಗ ಅದು 44.32 ಲಕ್ಷ ರೂ.ಗೆ ಏರಿಕೆಯಾಗಿದೆ.
ನಳಿನ್ ಕುಮಾರ್ ಹೆಸರಿನಲ್ಲಿ ಯಾವುದೇ ವಾಹನಗಳಿಲ್ಲ. ಆದರೆ ಅವರ ಪತ್ನಿಯ ಬಳಿ 60 ಸಾವಿರ ರೂ. ಬೆಲೆಯ ಮಾರುತಿ ಆಲ್ಟೋ ಕಾರು ಇದೆ. 27.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 9 ಸಾವಿರ ರೂ. ಮೌಲ್ಯದ ಬೆಳ್ಳಿ, 1 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು, 1 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ 30.42 ಲಕ್ಷ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ. ಅವರ ಪುತ್ರಿಯರ ಬಳಿ ತಲಾ 84 ಸಾವಿರ ರೂ. ಮೌಲ್ಯದ ಚಿನ್ನಾಭರಣ ಇವೆ.
ನಳಿನ್ ಕುಮಾರ್ ಬಳಿ 50 ಸಾವಿರ ರೂ. ಮೊತ್ತದ ವಿಮೆ, 28 ಸಾವಿರ ರೂ. ಮೌಲ್ಯದ 10 ಗ್ರಾಂ ಚಿನ್ನಾಭರಣ, 6.55 ಲಕ್ಷ ರೂ.ಮೌಲ್ಯದ ಚರಾಸ್ತಿ ಇದೆ. ಪುತ್ತೂರು ತಾಲೂಕಿನ ಪಾಲ್ತಾಡಿಯಲ್ಲಿ 10.15 ಎಕರೆ ನಿವೇಶನ ಹೊಂದಿದ್ದು, ಇದರಲ್ಲಿ ಅವರ ಕುಟುಂಬದವರಿಗೂ ಪಾಲು ಇದೆ. ಇದರ ಪ್ರಸ್ತುತ ಮಾರುಕಟ್ಟೆ ದರ 80.52 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ನಳಿನ್ ಅವರಿಗೆ 20 ಲಕ್ಷ ರೂ. ಮೌಲ್ಯದ ಆಸ್ತಿ ಇದೆ. ಪತ್ನಿ ಶ್ರೀದೇವಿ ಬೋಳೂರಿನಲ್ಲಿ 88 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಹೊಂದಿದ್ದಾರೆ.
ಪ್ರಚೋದನಕಾರಿ ಭಾಷಣ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸಂಬಂಧಿಸಿದಂತೆ ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ.