ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಗರ ಪಂಚಮಿಯ ಸಂಭ್ರಮ ಮನೆ ಮಾಡಿದೆ. ನಾಗರ ಪಂಚಮಿಯನ್ನು ಕರಾವಳಿಯಲ್ಲಿ ಜನರು ವಿಶೇಷವಾಗಿ ಆಚರಿಸುತ್ತಾರೆ. ನಾಗದೇವರನ್ನು ಆರಾಧಿಸುವ ಈ ಹಬ್ಬದ ದಿನ ಹಾಲು, ಎಳನೀರು, ಹೂವು, ಸಿಂಗಾರದೊಂದಿಗೆ ನಾಗಬನಗಳಲ್ಲಿ ಭಕ್ತರ ದಂಡು ಕಾಣಿಸುತ್ತಿದೆ.
ಪ್ರಕೃತಿ ಆರಾಧನೆಯ ಮಹತ್ವ ಸಾರುವ ನಾಗರ ಪಂಚಮಿಗೆ ತುಳುನಾಡಿನಲ್ಲಿ ವಿಶೇಷ ಸ್ಥಾನಮಾನ ಇದೆ. ಪ್ರತಿ ಕುಟುಂಬದ ಮನೆಯ ನಾಗ ಬನದಲ್ಲಿ ಭಕ್ತರು ನಾಗಾರಾಧನೆ ನಡೆಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಗೆ ಪ್ರಸಿದ್ದಿ ಪಡೆದಿರುವ ಹಲವು ದೇವಸ್ಥಾನಗಳಿವೆ. ದಕ್ಷಿಣ ಭಾರತದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗಾರಾಧನೆ ಮಾಡಲಾಗುತ್ತದೆ. ಅದೇ ರೀತಿ ಮಂಗಳೂರು ಹೊರ ವಲಯದಲ್ಲಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿಯೂ ನಾಗರಾಧನೆ ಮಾಡಲಾಗುತ್ತದೆ. ನಾಗರ ಪಂಚಮಿ ದಿನ ಇಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತದೆ.
ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರು ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ವಿವಿಧೆಡೆಯಿಂದ ನಾಗರಾಧನೆಗಾಗಿ ಭಕ್ತ ವೃಂದ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಸಂತಾನ ಪ್ರಾಪ್ತಿ, ಸರ್ಪ ದೋಷ ನಿವಾರಣೆಗೆ ಹೆಸರು ವಾಸಿಯಾಗಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ ಕಳೆಗಟ್ಟಿದೆ. ನಾಗ ಬನದಲ್ಲಿರುವ ವಿಗ್ರಹಗಳಿಗೆ ಹಾಲು ಹಾಗೂ ಎಳನೀರ ಅಭಿಷೇಕ ಮಾಡಿ, ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಗುತ್ತಿದೆ.
ನಾಗರ ಪಂಚಮಿ ಸಂಭ್ರಮ ಹಿನ್ನೆಲೆ ನಾಗಕ್ಷೇತ್ರಗಳು, ದೇವಾಲಯಗಳು ಹಾಗೂ ಕುಟುಂಬಗಳ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥನ ಸನ್ನಿಧಿ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಮಹಾಲಿಂಗೇಶ್ವರ, ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ನಾಗನಕಟ್ಟೆ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ನೀರುಮಾರ್ಗ ಮಾಣೂರು ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಶ್ರೀ ದೇವಸ್ಥಾನ ಹಾಗೂ ಪಣಂಬೂರು ನಂದನೇಶ್ವರ ದೇವಳದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ನೆರವೇರಿದೆ.