ಮಂಗಳೂರು:ಮನೆಯಲ್ಲಿ ಲಾಕರ್‌ನಲ್ಲಿ ಇಟ್ಟಿದ್ದ 75 ಪವನ್ ತೂಕದ (600 ಗ್ರಾಂ) ಚಿನ್ನಾಭರಣಗಳನ್ನು ಗಂಡ ಕದ್ದೊಯ್ದು ಸಾಲಕ್ಕಾಗಿ ಅಡವಿಟ್ಟಿದ್ದಾರೆ ಎಂದು ರೆನಿಶಾ ನೊರೊನ್ಹಾ ಎಂಬವರು ದೂರು ನೀಡಿದ್ದಾರೆ. ರೆನಿಶಾ ನೊರೊನ್ಹಾ ಅವರು ತಮ್ಮ ಪತಿ ಹಾಗೂ ಪತಿಯ ಸ್ನೇಹಿತನ ವಿರುದ್ಧ ನಗರದ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಅಳಲು ತೋಡಿಕೊಂಡ ಮಹಿಳೆ:ನನ್ನ ಪತಿಮತ್ತು ಮಗನೊಂದಿಗೆ ನಗರದ ವ್ಯಾಸ ನಗರದ ಶಾಂತಲಾ ಆಶಿಯಾನ ಅಪಾರ್ಟ್ಮೆಂಟ್ನಲ್ಲಿ ನಾನು ವಾಸವಿದ್ದೆ. ಮದುವೆ ಸಂದರ್ಭದಲ್ಲಿ ನನ್ನ ತವರು ಮನೆಯವರು ಚಿನ್ನ ನೀಡಿದ್ದರು. ಅದರಂತೆ ನನ್ನ ಗಂಡ ಕುಟುಂಬಸ್ಥರು ಚಿನ್ನ ನೀಡಿದ್ದರು. ಅಷ್ಟೇ ಅಲ್ಲ ನಾನು ಸಂಪಾದಿಸಿದ್ದ ಹಣದಲ್ಲಿ ಚಿನ್ನ ಖರೀದಿಸಿದ್ದೆ. ಒಟ್ಟು 75 ಪವನ್ ಚಿನ್ನಾಭರಣ ಮನೆಯ ಲಾಕರ್‌ನಲ್ಲಿ ಇಟ್ಟಿದ್ದೆ. ಈ ವಿಚಾರ ನನಗೆ ಮತ್ತು ಗಂಡನಿಗೆ ಮಾತ್ರವೇ ತಿಳಿದಿತ್ತು. ಚಿನ್ನಾಭರಣಗಳು ಲಾಕರ್‌ನಲ್ಲಿ ಭದ್ರವಾಗಿದೆ ಎಂದು ಭಾವಿಸಿ ಅದನ್ನು ಪರಿಶೀಲಿಸಲು ಹೋಗಿರಲಿಲ್ಲ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2023ರ ಏಪ್ರಿಲ್‌ನಲ್ಲಿ ನನಗೆ ಮತ್ತು ಪತಿ ನಡುವೆ ಜಗಳವಾಗಿತ್ತು. ಆ ಬಳಿಕ ನಾನು ತವರು ಮನೆಯಲ್ಲಿ ವಾಸವಿದ್ದೇನೆ. ಪತಿಯು ವಾಸವಿದ್ದ ಫ್ಲ್ಯಾಟ್‌ಗೆ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದೆ. ಇತ್ತೀಚೆಗೆ ಫ್ಲ್ಯಾಟ್‌ಗೆ ಭೇಟಿ ನೀಡಿದ್ದಾಗ ನನ್ನ ಪತಿ ಒಂದು ವಾರದಿಂದ ಫ್ಲಾಟ್‌ಗೆ ಬಂದಿಲ್ಲ ಎಂದು ಸೆಕ್ಯುರಿಟಿ ಅವರಿಂದ ತಿಳಿಯಿತು. ಕರೆ ಮಾಡಿದಾಗ ಪತಿ, 'ನಾನು ಲಾಕರ್ ಸಮೇತ ಚಿನ್ನವನ್ನು ಒಯ್ದಿದ್ದೇನೆ. ನೀನು ಏನು ಮಾಡುತ್ತೀಯೋ ಮಾಡು' ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು 28.5 ಲಕ್ಷ ಹಣ ಪಡೆದಿದ್ದೇನೆ ಎಂದೂ ತಿಳಿಸಿದ್ದಾರೆ. ಸಾಲದ ಬಡ್ಡಿ ಕಟ್ಟಲಾಗದೇ ಸ್ನೇಹಿತನಿಗೆ ಮೂರು ತಿಂಗಳ ಬಡ್ಡಿಯನ್ನು ಕಟ್ಟಲು ಹೇಳಿದ್ದೆ. ಅಡವಿಟ್ಟ ಚಿನ್ನದಲ್ಲಿ ಸ್ನೇಹಿತ 3 ತಿಂಗಳಿಗೆ ಮುನ್ನವೇ ಸುಮಾರು 1. 12 ಲಕ್ಷದಷ್ಟು ಚಿನ್ನವನ್ನು ಬಿಡಿಸಿ, ಕರಗಿಸಿ ಮಾರಾಟ ಮಾಡಿದ್ದಾನೆ ಎಂದೂ ತಿಳಿಸಿದ್ದಾರೆ. ಆದ್ದರಿಂದ ಪತಿ ಮತ್ತು ಪತಿಯ ಸ್ನೇಹಿತನ ವಿರುದ್ಧ ಕ್ರಮ ಜರುಗಿಸಬೇಕು ಎಂಬುದಾಗಿ ಮಹಿಳೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ದೀಪಕ್ ರಾವ್ ಕೊಲೆ ಆರೋಪಿ ಸೆರೆ:ದೀಪಕ್ ರಾವ್ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ಸುಮಾರು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಮಂಗಳೂರಿನ ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ಯ ಮೊಹಮ್ಮದ್ ನೌಷದ್ ಯಾನೆ ಉಲ್ಲಂಜೆ ನೌಷದ್(28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣ ಸೇರಿದಂತೆ 4 ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡು ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.