ಮಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧಾರಣೆ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಬೆಂಬಲಿಸಿ ಮಂಗಳೂರಿನಲ್ಲಿ ಮುಸ್ಲಿಂ ವರ್ತಕರು ತಮ್ಮ ವ್ಯಾಪಾರವನ್ನು ಬಂದ್ ಮಾಡಿದ್ದಾರೆ.
ಕರ್ನಾಟಕ ಅಮೀರ್ ಎ ಶರೀಯತ್ನ ಮೌಲನಾ ಸಗೀರ್ ಅಹ್ಮದ್ ಅವರು ಕರೆ ನೀಡಿರುವ ರಾಜ್ಯ ಬಂದ್ಗೆ ವಿವಿಧ ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿತ್ತು. ಕರ್ನಾಟಕ ಬಂದ್ ಕರೆಗೆ ಬೆಂಬಲಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ವರ್ತಕರು ತಮ್ಮ ವ್ಯಾಪಾರ ಬಂದ್ ಮಾಡಲು ನಿರ್ಧರಿಸಿದ್ದರು.
ಅಂಗಡಿ ಮುಚ್ಚಿದ ಮುಸ್ಲಿಂ ವರ್ತಕರು ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿ ಇಂದು ಮುಸ್ಲಿಂ ವರ್ತಕರು ವ್ಯಾಪಾರ ಮಾಡಲು ಹಾಜರಾಗದೇ ಇರುವುದು ಕಂಡು ಬಂದಿದ್ದು, ಮುಸ್ಲಿಂ ವರ್ತಕರ ವ್ಯಾಪಾರ ನಡೆಯುವ ಸ್ಥಳ ಬಂದ್ ಆಗಿತ್ತು. ಅದೇ ರೀತಿಯಲ್ಲಿ ಮುಸ್ಲಿಂ ವರ್ತಕರು ಹೆಚ್ಚಾಗಿರುವ ಬಂದರ್, ಕುದ್ರೋಳಿ, ಸ್ಟೇಟ್ ಬ್ಯಾಂಕ್ನ ರಸ್ತೆ ಬದಿ, ಮಾರ್ಕೆಟ್ ರಸ್ತೆಗಳಲ್ಲಿ ವ್ಯಾಪಾರ ಸ್ಥಗಿತಗೊಂಡಿದೆ.
ಮುಸ್ಲಿಂ ವ್ಯಾಪಾರಿಗಳ ವ್ಯಾಪಾರ ಬಂದ್ ಹೊರತುಪಡಿಸಿ ಇತರ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದೆ.
ಇದನ್ನೂ ಓದಿ:ಮನೆ ಸುತ್ತ ಕಂದಕ ತೋಡಿ ಮಾಲೀಕನಿಂದ ಕಿರುಕುಳ: ನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕಾರ್ಮಿಕ