ಮಂಗಳೂರು : ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮೀನುಗಾರರ ಬಲೆಗೆ 350 ಕೆಜಿ ತೂಕದ ಬೃಹತ್ ಮುರು ಮೀನು ಸಿಕ್ಕಿದೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ನಗರದ ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಎಂದು ಹೊರಟ ಬೋಟ್ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 350 ಕೆಜಿಯಷ್ಟು ತೂಕ ಇರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಟೆಂಪೊಗೆ ಹಾಕಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ಈ ಜಾತಿಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ. ಒಂದೊಂದು ಮೀನು 250 ಗ್ರಾಂ ನಿಂದ 500 ಗ್ರಾಂ ವರೆಗೆ ಮಾರುಕಟ್ಟೆ ಗೆ ಬರುತ್ತದೆ. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣಲು ಸಿಗುವುದು ವಿರಳ. ಸಾಮಾನ್ಯವಾಗಿ ಸಿಗುವ ಮುರು ಮೀನುಗಳು 100 ರಿಂದ 150 ಕ್ಕೆ ಮಾರಾಟವಾದರೆ ಈ ಮೀನು ಕೆಜಿಗೆ 200 ರೂ. ಬೆಲೆಗೆ ಮಾರಾಟವಾಗಿದೆ.
ಬುಧವಾರ ದೊಡ್ಡ ಪಿಲಿ ತೊರಕೆ ಸಿಕ್ಕಿತ್ತು :ಉಳ್ಳಾಲದಲ್ಲಿ ಸೋಮೇಶ್ವರ ಉಚ್ಚಿಲ ಮೀನುಗಾರರು ಸಮುದ್ರ ತಟದ ಸಮೀಪ ಬೀಸಿದ ಬಲೆಗೆ 75 ಕೆಜಿಯ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬುಧವಾರ ಸಂಜೆ ಹೊತ್ತಿಗೆ ಬಿದ್ದಿತ್ತು. ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬುವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಮೀನು ಸಿಕ್ಕಿತ್ತು.
ದೇಶ ಅತಿದೊಡ್ಡ ಬಂಗುಡೆ ಮೀನು ಪತ್ತೆ : ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗುಡೆ ಮೀನುಗಳಲ್ಲಿ ಅತಿ ದೊಡ್ಡದು ಹಾಗೂ ಉದ್ದವಿರುವ ಬಂಗುಡೆ ಮೀನೊಂದು ಕಾರವಾರದ ಅರಬ್ಬಿ ಸಮುದ್ರದಲ್ಲಿ ಆನಂದು ರಾಮಾ ಹರಿಕಂತ್ರ ಅವರಿಗೆ ಸೇರಿದ, ಎಂಐ ಇಂಜಿನ್ ಹೊಂದಿದ ಪಾತಿ ದೋಣಿಯ ಬೀಡು ಬಲೆಗೆ ಆಗಸ್ಟ್ 28 ರಂದು ಬಿದ್ದಿತ್ತು. ಈ ಬಂಗುಡೆ ಸುಮಾರು 48 ಸೆಂ.ಮೀ ಉದ್ದ, 12 ಸೆಂ.ಮೀ ಅಗಲವಿತ್ತು. 1.2 ಕೆಜಿ ತೂಕವಿದ್ದು, ಪಶ್ಚಿಮ ಕರಾವಳಿ ಭಾಗದಲ್ಲಿ ಸಿಕ್ಕಿರುವ ಬಂಗುಡೆ ಮೀನುಗಳಲ್ಲಿ ಇದು ಅತಿ ಹೆಚ್ಚು ತೂಕದ್ದಾಗಿತ್ತು. ಈ ಹಿಂದೆ 36 ಸೆಂ.ಮೀ. ಗಂಡು ಬಂಗುಡೆ, 42 ಸೆಂ.ಮೀ. ಹೆಣ್ಣು ಬಂಗುಡೆ ಸಿಕ್ಕಿರುವುದು ದಾಖಲೆಯಾಗಿತ್ತು. ಸಾಮಾನ್ಯವಾಗಿ ದೊಡ್ಡ ಬಂಗುಡೆ ಮೀನುಗಳು 25ರಿಂದ 30 ಸೆಂ.ಮೀವರೆಗೆ ಮಾತ್ರ ಬೆಳೆಯುತ್ತದೆ. ಭಾರತದಲ್ಲಿ ದೊರೆತ ಬಂಗುಡೆ ಮೀನುಗಳಲ್ಲಿ ಅತ್ಯಂತ ದೊಡ್ಡದಾದ ಬಂಗುಡೆ ಮೀನೆಂಬ ದಾಖಲೆಗೆ ಇದು ಪಾತ್ರವಾಗಿತ್ತು.
ಚಿಕ್ಕಮಗಳೂರಿನಲ್ಲಿ ಬರೋಬ್ಬರಿ 340 ಕೆಜಿ ಅಂಬೂರು ಮೀನು :ಕಳೆದ ತಿಂಗಳು ಆಗಸ್ಟ್.20 ರಂದು ಬರೋಬ್ಬರಿ 340 ಕೆಜಿ ತೂಕದ ಬೃಹತ್ ಮೀನನ್ನು ನೋಡಲು ಜನರು ಮುಗಿಬಿದ್ದಿದ್ದ ಘಟನೆ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿತ್ತು. ಇಲ್ಲಿನ ಅಂಗಡಿಯೊಂದರಲ್ಲಿ ಮತ್ಸ್ಯ ಜಾತಿಯಲ್ಲೇ ಅಪರೂಪದ ತಳಿಯಾದ ಅಂಬೂರು ಸಮುದ್ರ ಮೀನನ್ನು ಕಂಡು ಜನರು ಅಚ್ಚರಿಗೊಂಡಿದ್ದರು.
ಇಲ್ಲಿನ ಮತ್ಸ್ಯ ವ್ಯಾಪಾರಿಯೊಬ್ಬರು ಮೊದಲ ಬಾರಿಗೆ 340 ಕೆಜಿ ತೂಕದ ಅಂಬೂರು ಸಮುದ್ರ ಮೀನನ್ನು ಗ್ರಾಹಕರ ಬೇಡಿಕೆ ಮೇರೆಗೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ತರಿಸಿದ್ದರು. ಇದಕ್ಕೆ ಪ್ರತಿ ಕೆಜಿ ಮೀನಿಗೆ 600 ರೂಪಾಯಿ ನಿಗದಿಪಡಿಸಿದ್ದರು. ಗ್ರಾಹಕರ ಬೇಡಿಕೆ ಹೆಚ್ಚಾದಂತೆ ಒಂದು ಕೆಜಿಗೆ ಸಾವಿರ ರೂಪಾಯಿ ಮಾಡಿದ್ದರು. ಆದರೂ ಗ್ರಾಹಕರು ಮೀನಿನ ಬೆಲೆಯನ್ನು ಲೆಕ್ಕಿಸದೇ ಖರೀದಿಸಿ ಕೊಂಡೊಯ್ದಿದ್ದರು.
ಇದನ್ನೂ ಓದಿ :ಕಾರವಾರ: ಮೀನುಗಾರರ ಬಲೆಗೆ ಬಿದ್ದ 48 ಸೆ.ಮೀ ಉದ್ದ, 1.2 ಕೆಜಿ ತೂಕದ ಬಂಗುಡೆ!