ಮಂಗಳೂರು: ಕುಡಿತ ಬಿಡುವಂತೆ ಬುದ್ಧಿವಾದ ಹೇಳಿದ್ದ ದೊಡ್ಡಪ್ಪನ ಮಗನನ್ನೇ ಕೊಲೆಗೈದಿರುವ ಆರೋಪಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಬಂಟ್ವಾಳ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿ ರಾಜೇಶ ಯಾನೆ ನವೀನ (27) ಶಿಕ್ಷೆಗೊಳಗಾದ ಆರೋಪಿ. ಸಾಕ್ಷಿದಾರರು ನುಡಿದ ಸಾಕ್ಷವನ್ನು ಪರಿಗಣಿಸಿ ಆರೋಪಿಯೇ ಕೊಲೆ ಮಾಡಿರುವುದನ್ನು ರುಜುವಾತಾಗಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣ ವಿವರ:ಶಿಕ್ಷೆಗೊಳಗಾದ ರಾಜೇಶ ಮತ್ತು ಕೊಲೆಯಾದ ರಂಜಿತ್ ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು, ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿಗಳಾಗಿದ್ದಾರೆ. ಇವರ ಮನೆಗಳು ಆಸುಪಾಸಿನಲ್ಲಿದ್ದವು. ಆರೋಪಿ ರಾಜೇಶನಿಗೆ ವಿಪರೀತ ಮದ್ಯ ಸೇವನೆ ಚಟವಿದ್ದು, ಯಾರ ಬುದ್ಧಿ ಮಾತನ್ನೂ ಕೇಳುತ್ತಿರಲಿಲ್ಲ. ಇದರಿಂದ ನೊಂದಿದ್ದ ಆತನ ಹೆತ್ತವರು ಬುದ್ಧಿ ಹೇಳುವಂತೆ ರಂಜಿತ್ ಮತ್ತು ಆತನ ತಂದೆತಾಯಿಯವರಿಗೆ ಹೇಳಿದ್ದರು. ಅದರಂತೆ ರಂಜಿತ್ ಹಲವು ಬಾರಿ ರಾಜೇಶನಿಗೆ ಬುದ್ಧಿ ಮಾತು ಹೇಳಿದ್ದ. ಇದರಿಂದ ರಂಜಿತ್ ಮೇಲೆ ರಾಜೇಶನಿಗೆ ವೈಮನಸ್ಯ ಉಂಟಾಗಿತ್ತು.
2017ರ ಮೇ 15ರಂದು ರಾತ್ರಿ ಬಿ.ಸಿ.ರೋಡ್‌ನ ಬಾರ್‌ನಲ್ಲಿ ರಾಜೇಶ್ ಆತನ ಗೆಳೆಯರೊಂದಿಗೆ ಮದ್ಯ ಸೇವಿಸುತ್ತಿದ್ದ. ಆಗ ರಂಜಿತ್ ಬುದ್ಧಿ ಮಾತು ಹೇಳಿದ. ಅಲ್ಲದೆ, ರಾಜೇಶ್‌ನು ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಆತನನ್ನು ಶೇಡಿಗುರಿ ಎಂಬಲ್ಲಿ ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದ. ಇದರಿಂದ ರಾಜೇಶ್ ಮತ್ತಷ್ಟು ಮುನಿಸಿಕೊಂಡು ಪ್ರತೀಕಾರವಾಗಿ ರಂಜಿತ್‌ನನ್ನು ಕೊಲೆ ಮಾಡಬೇಕು ಎಂದು ನಿರ್ಧರಿಸಿದ್ದಾನೆ.