ಸುಳ್ಯ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿವೋರ್ವನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರ ಸಹಕಾರದೊಂದಿಗೆ ಬಂಧಿಸುವಲ್ಲಿ ಮಡಿಕೇರಿಯ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೂಲಿ ಕಾರ್ಮಿಕ ರವಿ ಎಂಬವರನ್ನು ಹತ್ಯೆ ಮಾಡಿದ್ದ ಆರೋಪದಡಿ ಆರ್.ಡಿ.ಬಾಲಕೃಷ್ಣ ಎಂಬಾತನನ್ನು ಪೊಲೀಸರು ಸುಳ್ಯದಲ್ಲಿ ಬಂಧಿಸಿದ್ದಾರೆ. ರವಿ ಮತ್ತು ಬಾಲಕೃಷ್ಣ ಕೂಲಿ ಕೆಲಸಕ್ಕಾಗಿ ನಾಪೊಕ್ಲುವಿನ ಇಂದಿರಾ ನಗರದಲ್ಲಿ ವಾಸವಾಗಿದ್ದರು. ಮಾ. 31 ರಂದು ಇವರು ಹೋಟೆಲ್ನಲ್ಲಿ ಊಟ ಮುಗಿಸಿ ಮಲಗಲು ಕೊಠಡಿಗೆ ಬಂದಾಗ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಬಾಲಕೃಷ್ಣನು ರವಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.