ಮಂಗಳೂರು: ಇಂದು ಕೃಷಿ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಮುಂದಿನ ಪೀಳಿಗೆ ಕೃಷಿಯ ಅನುಭವವನ್ನೇ ಪಡೆಯದೆ, ಕೃಷಿಕರ ಬವಣೆಗಳ ಬಗ್ಗೆ ಅರಿವನ್ನೇ ಪಡೆಯಲಾರದ ದುಸ್ಥರ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭವನ್ನು ಮನಗಂಡು ನಗರದ ಕೊಣಾಜೆ ಸಮೀಪದ ಹರೇಕಳದ ಪರಂಡೆ ಎಂಬಲ್ಲಿ ಸ್ಕೌಟ್ ಗೈಡ್ಸ್ ಮಕ್ಕಳಿಗೆ ಮಳೆಯಲ್ಲಿ ಭತ್ತದ ನಾಟಿ, ಕೆಸರುಗದ್ದೆ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕೆಸರುಗದ್ದೆ ಕ್ರೀಡೋತ್ಸವ: ಸ್ಕೌಟ್ಸ್ ಮಕ್ಕಳಿಂದ ಕೃಷಿ ಸಂಸ್ಕೃತಿಯ ಅನಾವರಣ -
ಇಂದಿನ ಪೀಳಿಗೆಗೆ ಕೃಷಿ ಸಂಸ್ಕೃತಿಯ ಗಂಧ-ಗಾಳಿಯೂ ಗೊತ್ತಿಲ್ಲ, ಇನ್ನು ಕೃಷಿ ಜೀವನದ ಅನುಭವವಂತೂ ದೂರದ ಮಾತು, ಈ ಹಿನ್ನೆಲೆ ಕೆಸರುಗದ್ದೆ ಕ್ರೀಡೋತ್ಸವನ್ನು ಹಮ್ಮಿಕೊಂಡು ಮಕ್ಕಳಿಗೆ ಅರಿವನ್ನು ಮೂಡಿಸುವ ಕೆಲಸ ಮಾಡಲಾಯಿತು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ ಮತ್ತು ಸೌಜನ್ಯ ಸ್ಕೌಟ್ ದಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವತಿಯಿಂದ ನಡೆದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಮಕ್ಕಳು ಜಾನಪದ ಹಾಡುಗಳಿಗೆ ಕುಣಿದರು, ನೀರಾಟವಾಡಿದರು, ಕೆಸರಿನಲ್ಲಿ ವಿವಿಧ ಪಂದ್ಯಗಳಲ್ಲಿ ಭಾಗವಹಿಸಿದರು. ಅಲ್ಲದೆ ಕಂಗೀಲು, ಆಟಿಕಳೆಂಜ, ಕೋಲಾಟ ಮುಂತಾದ ವಿವಿಧ ತುಳವ ಜಾನಪದ ಸಂಸ್ಕೃತಿಗಳ ಅನಾವರಣವನ್ನು ಮಕ್ಕಳಿಂದ ಮಾಡಿಸಲಾಯಿತು. ಅಲ್ಲದೆ ಭತ್ತದ ನಾಟಿಯನ್ನು ಮಕ್ಕಳೇ ನಿರ್ವಹಿಸಿ ಕೃಷಿ ಸಂಸ್ಕೃತಿಯ ಪರಿಚಯ ಮಾಡಿಕೊಂಡರು.
ಮಕ್ಕಳು ಅತೀ ಉತ್ಸಾಹದಿಂದ ಈ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದಲ್ಲದೇ , ತಮ್ಮಲ್ಲಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಸುಮಾರು 200 ಕ್ಕೂ ಅಧಿಕ ಮಂದಿ ಈ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.