ಮಂಗಳೂರು : ಕೇಂದ್ರ ರೈಲ್ವೇ ನಿಲ್ದಾಣದಲ್ಲಿ 20 ರೈಲ್ವೇ ಬೋಗಿಗಳನ್ನು ಕೊರೊನಾ ಸೋಂಕಿತರಿಗಾಗಿ ಮೀಸಲಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ರೈಲ್ವೆ ಐಸೋಲೇಷನ್ ವಾರ್ಡ್ಗಳನ್ನು ಪರಿಶೀಲನೆ ನಡೆಸಿದರು.
ಪರಿಶೀಲನೆ ನಂತರ ಮಾತನಾಡಿದ ನಳಿನ್ ಕುಮಾರ್, ವೈದ್ಯಕೀಯ ವಿಭಾಗದ ತಜ್ಞರ ಮಾರ್ಗಸೂಚಿಯಂತೆ ರೈಲ್ವೆ ಇಂಜಿನಿಯರಿಂಗ್ ವಿಭಾಗವು ರೈಲು ಬೋಗಿಗಳನ್ನು ಕೊರೊನಾ ಪೀಡಿತರ ಚಿಕಿತ್ಸೆಗೆ ಅಗತ್ಯ ರೀತಿಯಲ್ಲಿ ಪರಿವರ್ತಿಸಿದೆ. 20 ಬೋಗಿಗಳನ್ನು ತಲಾ 16 ಬೆಡ್ ಗಳಂತೆ ಪರಿವರ್ತಿಸಲಾಗಿದೆ. ಈ ಮೂಲಕ 320 ಐಸೋಲೇಷನ್ ವಾರ್ಡ್ಗಳು ರೆಡಿಯಾಗಿವೆ ಎಂದರು.
ಪ್ರತೀ ಬೋಗಿಯಲ್ಲಿ ವೈದ್ಯರು, ದಾದಿಯರು ಹಾಗೂ ಸಹಾಯಕ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ಇರುತ್ತದೆ. ಆಸ್ಪತ್ರೆಯ ಆವಶ್ಯಕತೆಗೆ ತಕ್ಕಂತೆ ಕೊಳವೆಗಳನ್ನು ಜೋಡಿಸುವುದು ದೊಡ್ಡ ಕೆಲಸವಾಗಿತ್ತು. ಕೆಲ ಟಾಯ್ಲೆಟ್‌ಗಳನ್ನು ಸ್ನಾನಗೃಹಗಳಾಗಿ ಪರಿವರ್ತಿಸಲಾಗಿದೆ. ಎಲ್ಲ ಬೋಗಿಗಳಲ್ಲಿ ಯುರೋಪಿಯನ್ ಹಾಗೂ ಸಾಮಾನ್ಯ ಕಮೊಡ್‌ಗಳು ಇರಲಿದೆ ಎಂದರು.
ಸದ್ಯಕ್ಕೆ ದಕ್ಷಿಣ ಕನ್ನಡದಲ್ಲಿದ್ದ 12 ಮಂದಿ ಕೊರೊನಾ ಸೋಂಕಿತರಲ್ಲಿ, 6 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದರೂ ಮುನ್ನೆಚ್ಚರಿಕೆ ಹಾಗೂ ಪೂರ್ವ ಸಿದ್ಧತೆಯಿಂದ ಈ ಐಸೊಲೇಶನ್ ರೈಲ್ವೆ ಬೋಗಿಗಳ ವಾರ್ಡ್ಗಳನ್ನು ಮೀಸಲಿರಿಸಲಾಗಿದೆ.
ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಸೆಂಟ್ರಲ್ ರೈಲ್ವೇ ಕಾರ್ಯಾಗಾರದ ಪ್ರಧಾನ ವ್ಯವಸ್ಥಾಪಕ ರಾಕೇಶ್ ಕುಮಾರ್ ಮೀನಾ ಉಪಸ್ಥಿತರಿದ್ದರು.