ಪುತ್ತೂರು:ಶತಮಾನಗಳ ಹಿಂದೆ ಮಾನವ ರೂಪ ತೊರೆದು ದೈವಿ ಶಕ್ತಿಗಳಾದ ಕೋಟಿ – ಚನ್ನಯರೆಂಬ ಅವಳಿ ಸಹೋದರರು ಜನ್ಮ ತಾಳಿದ ಐತಿಹಾಸಿಕ ನೆಲ ಪಡುಮಲೆಯಲ್ಲಿ ಮೊದಲ ಹಂತದ ಕಾಮಗಾರಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ.
ದೈವಜ್ಞರ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಪಡುಮಲೆಯ ಏರಾಜೆಯ ಎರುಕೊಟ್ಯದಲ್ಲಿ ನಾಗಬೆರ್ಮರಗುಡಿ, ನಾಗಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ಮಹಾಮಾತೆ ದೇಯಿಬೈದೆತಿ ಸಮಾಧಿ ಸ್ಥಳ ಜೀರ್ಣೋದ್ಧಾರಗೊಂಡಿದೆ. ಈ ಸಾನಿಧ್ಯಗಳನ್ನು ಅಭಿವೃದ್ಧಿಗೊಳಿಸಿ ಪ್ರತಿಷ್ಠಾಪನೆ ಕಾರ್ಯ ಮಾಡಿದ ಬಳಿಕ ಮುಂದಿನ ಹಂತದ ಕಾರ್ಯಗಳು ನಡೆಯಬೇಕು ಎಂಬುದು ದೈವಜ್ಞದ ಚಿಂತನೆಯಾಗಿತ್ತು.
ಏಪ್ರಿಲ್ 22ರಿಂದ 24 ರವರೆಗೆ ಕೋಟಿ-ಚನ್ನಯರ ಜನ್ಮಸ್ಥಾನ ಪಡುಮಲೆಯಲ್ಲಿ ಜೀರ್ಣೋದ್ಧಾರಗೊಂಡಿರುವ ಸಾನಿಧ್ಯ ಸ್ಥಳಗಳಲ್ಲಿ ಬ್ರಹ್ಮಕಲಶ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಪಡುಮಲೆಗೆ ಭೇಟಿ ನೀಡಿ ಬ್ರಹ್ಮ ಕಲಶೋತ್ಸವದ ಸಿದ್ಧತೆಯ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಇದೊಂದು ಅತ್ಯಂತ ಶ್ರೇಷ್ಠ ಗಳಿಗೆ. ಸರ್ಕಾರದ ಕೋವಿಡ್ ನಿಯಮಾವಳಿಯಂತೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಜನರು ಕೂಡ ಕೋವಿಡ್ ನಿಯಮಾನುಸಾರ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಅನ್ನ ಛತ್ರ, ಭಕ್ತಾದಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಸಭಾಂಗಣ ಮುಂತಾದ ವ್ಯವಸ್ಥೆಗಳೊಂದಿಗೆ ಬ್ರಹ್ಮಕಲಶದ ಸಿದ್ಧತೆ ನಡೆದಿದೆ ಎಂದರು.
ಪಡುಮಲೆ ಕೋಟಿ- ಚನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ರುಕ್ಮಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿಗುತ್ತು ಸೇರಿದಂತೆ ಹಲವರು ಉಪಸ್ಥಿತರಿದ್ದರು.