ಮಂಗಳೂರು : ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮಂಗಳೂರು-ಬೆಂಗಳೂರು ನಡುವೆ ಪಶ್ಚಿಮ ಘಟ್ಟದ ಸೌಂದರ್ಯ ಸವಿಯುತ್ತಾ ಪ್ರಯಾಣಿಸಲು ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲಿಗೆ ಇಂದು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಜಂಕ್ಷನ್ -ಯಶವಂತಪುರ ಹಗಲು ರೈಲಿನ ಒಂದು ಸಾಮಾನ್ಯ ಬೋಗಿಯನ್ನು ರದ್ದುಗೊಳಿಸಿ ಎರಡು ವಿಸ್ಟಾಡೋಮ್ ಕೋಚ್ಗಳನ್ನು ಅಳವಡಿಸಲಾಗಿದೆ. ಪ್ರತೀ ವಿಸ್ಟಾಡೋಮ್ ಕೋಚ್ನಲ್ಲಿ 44 ಮಂದಿ ಕುಳಿತುಕೊಳ್ಳಲು ಅವಕಾಶವಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಎರಡು ದಿನಗಳಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿವೆ.
ಸಂಸದ ನಳಿನ್ ಕುಮಾರ್ ಕಟೀಲ್ ವಿಶೇಷ ಕೋಚ್ ರೈಲಿಗೆ ಚಾಲನೆ ನೀಡಿದರು ವಿಸ್ಟಾಡೋಮ್ ಕೋಚ್ನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಪ್ರಯಾಣಕ್ಕೆ 1,395 ರೂಪಾಯಿ ದರ ನಿಗದಿಪಡಿಸಲಾಗಿದೆ. ಜುಲೈ 13 ರಿಂದ ವಾರಕ್ಕೆ ಮೂರು ಬಾರಿ ಸಂಚರಿಸುವ ಯಶವಂತಪುರ- ಮಂಗಳೂರು ನಡುವೆ ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲುಗಳು ಸಂಚರಿಸಲಿವೆ.
ಓದಿ : ಸಾರ್ವಜನಿಕರ ಆರೋಗ್ಯಕ್ಕೆ ಒತ್ತು: ಜು. 13ರಂದು ಸಾರಿಗೆ ಸುರಕ್ಷಾ ಐಸಿಯು ಬಸ್ಗೆ ಚಾಲನೆ
ವಿಸ್ಟಾಡೋಮ್ ಕೋಚ್ ಪ್ರಯಾಣದ ಮೂಲಕ ಪ್ರಯಾಣಿಕರು ಪಶ್ಚಿಮ ಘಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇದರಲ್ಲಿ ಒರಗಿ ಕೂರಬಹುದಾದ ಸೀಟಿಂಗ್ ವ್ಯವಸ್ಥೆ, ವಿಶಾಲ ಕಿಟಕಿಗಳು ಇದ್ದು, 180° ಯಲ್ಲಿ ಪ್ರಕೃತಿ ಸೌಂದರ್ಯ ಸವಿಯುವಂತೆ ಗಾಜು ಅಳವಡಿಸಲಾಗಿದೆ.
ವಿಸ್ಟಾಡೋಮ್ ಕೋಚ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ವಿಸ್ಟಾಡೋಮ್ ಕೋಚ್ ರೈಲಿಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ಎರಡು ಕೋಚ್ಗಳನ್ನು ಅಳವಡಿಸಲಾಗಿದೆ.
ಬೆಂಗಳೂರು-ಮಂಗಳೂರು ರೈಲ್ವೆ ಪ್ರಯಾಣದ ಮೂಲಕ ಪ್ರಯಾಣಿಕರು ಪ್ರಕೃತಿ ರಮಣೀಯ ದೃಶ್ಯಗಳನ್ನು ಆಸ್ವಾದಿಸುತ್ತಾ ಸಾಗಬಹುದು. ಈ ರೀತಿಯ ರೈಲು ವ್ಯವಸ್ಥೆ ಮಾಡಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಅಭಿನಂದನೆಗಳು ಎಂದರು.