ಮಂಗಳೂರು: ವಿದೇಶದಿಂದ ಬಂದಿರುವವರು ಕ್ವಾರಂಟೈನ್ಗೆ ಮತ್ತು ರಾಜ್ಯ ಸರ್ಕಾರದ ನೀತಿ ನಿಯಮಗಳಿಗೆ ಒಪ್ಪಿದ್ದೇವೆ ಎಂದು ಸಹಿ ಹಾಕಿಯೇ ಬಂದಿರುತ್ತಾರೆ. ಇಲ್ಲಿ ಬಂದ ಬಳಿಕ ಅವರಿಗೆ ವಿಭಾಗವಾರು ಹೋಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ಹಣ ಕೊಡಲು ಸಾಧ್ಯವಿಲ್ಲದವರಿಗೆ ಉಚಿತವಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಬೇಡ ಎಂದು ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊರ ರಾಜ್ಯ, ಹೊರ ದೇಶಗಳಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಇರಲೇಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಹಾಗಾಗಿ ಯಾರೆಲ್ಲ ಕ್ವಾರಂಟೈನ್ ಇರಲು ಒಪ್ಪುತ್ತಾರೋ, ಅವರನ್ನು ರಾಜ್ಯಕ್ಕೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಅನಿವಾಸಿ ಭಾರತೀಯರನ್ನು ರಿಜಿಸ್ಟ್ರೇಷನ್ ಆಧಾರದಲ್ಲಿ ನಾಲ್ಕು ವಿಭಾಗಗಳನ್ನು ಮಾಡಿ ಕರೆ ತರಲಾಗುತ್ತಿದೆ. ಮೊದಲ ವಿಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರು, ಶ್ರುಶೂಷೆಗೊಳಪಟ್ಟ ರೋಗಿಗಳು, ವೀಸಾ, ಪಾಸ್ಪೋರ್ಟ್, ಉದ್ಯೋಗ ಕಳೆದುಕೊಂಡಿವರಿಗೆ ಪ್ರಾಶಸ್ತ್ಯ ನೀಡಲಾಗಿದೆ. ನಿನ್ನೆ ದುಬೈನಿಂದ ಮೊದಲ ವಿಮಾನ ಕರಾವಳಿಗೆ ಬಂದಿದೆ. ಅದೇ ರೀತಿ ಕತಾರ್, ಅಬುಧಾಬಿ ಮುಂತಾದ ಕಡೆಗಳಿಂದಲೂ ಅನಿವಾಸಿ ಭಾರತೀಯರು ಹುಟ್ಟೂರಿಗೆ ಬರಲು ಅರ್ಜಿ ಹಾಕಿದ್ದಾರೆ. ಅವರೆಲ್ಲರನ್ನೂ ಮುಂದಿನ ದಿನಗಳಲ್ಲಿ ಕರೆ ತರುವ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ಬರುವವರಿಗೆ ಪಾಸ್ಗಳನ್ನು ಕೊಡುವ ಕೆಲಸಗಳು ಆಗಿದೆ. ಸೇವಾ ಸಿಂಧು ಆ್ಯಪ್ನ ಆಧಾರದಲ್ಲಿ ಎನ್ಒಸಿ ಮಾಡುವ ಕಾರ್ಯವನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ. ನಿನ್ನೆಯಿಂದ ದೆಹಲಿಯಿಂದ ಕೇರಳಕ್ಕೆ ಒಂದು ರೈಲು ದಿನವೂ ಬರುತ್ತಿದೆ. ಯಾರು ಸ್ವಂತ ವಾಹನಗಳಲ್ಲಿ ಬರುತ್ತಾರೋ ಅದಕ್ಕೆ ಪೂರಕವಾಗಿರುವ ಎನ್ಒಸಿಗಳನ್ನು ತಕ್ಷಣ ನೀಡಲಾಗುತ್ತದೆ. ಎಲ್ಲೆಲ್ಲಿ ಹೆಚ್ಚಿನ ರೈಲುಗಳ ವ್ಯವಸ್ಥೆ ಬೇಕೋ ಅದನ್ನು ಮಾಡಲಾಗುತ್ತಿದೆ. ವಲಸೆ ಕಾರ್ಮಿಕರಿಗಾಗಿ ಪ್ರತಿದಿನ ರೈಲಿನ ವ್ಯವಸ್ಥೆ ಮಾಡಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ವಲಸೆ ಕಾರ್ಮಿಕರು ಅವರ ತವರಿಗೆ ಹೋಗುತ್ತಿದ್ದಾರೆ. ಹಾಗಾಗಿ ತಕ್ಷಣದ ವ್ಯವಸ್ಥೆಗೆ ಕಾನೂನುಗಳ ತೊಡಕುಗಳು ಇವೆ. ಅದನ್ನು ನೋಡಿಕೊಂಡು ರೈಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.