ಮಂಗಳೂರು (ದಕ್ಷಿಣ ಕನ್ನಡ): ನಕಲಿ ಬ್ಯಾಂಕ್ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ಮಾಡಿರುವ ಪ್ರಕರಣದಡಿ ಜಿಲ್ಲೆಯ ಕಡಬದ ಐತೂರು ಗ್ರಾಮದ ಚಂದ್ರಶೇಖರ ಎಂ.ಕೆ. ಎಂಬ ಯುವಕನನ್ನು ಸೌದಿ ಅರೇಬಿಯಾದ ರಿಯಾದ್ನಲ್ಲಿ ಬಂಧಿಸಲಾಗಿದೆ. ಹ್ಯಾಕರ್‌ಗಳು ನಕಲಿ ಖಾತೆ ಸೃಷ್ಟಿಸಿ ವಂಚಿಸಿದ್ದು, ನಿರಪರಾಧಿ ಯುವಕನ ಬಿಡುಗಡೆಗೆ ಪ್ರಯತ್ನಿಸುವಂತೆ ಒತ್ತಾಯಿಸಿ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರ ಬರೆದಿದ್ದಾರೆ.
ಪತ್ರದ ವಿವರ:ನನ್ನ ಸಂಸದೀಯ ಕ್ಷೇತ್ರದ ನಿವಾಸಿ 33 ವರ್ಷದ ಚಂದ್ರಶೇಖರ್ ಮುಜೂರ್ ಕೆಂಚಪ್ಪ ಎಂಬವರು 2022ರಿಂದ ಸೌದಿ ಅರೇಬಿಯಾದ AL FANAR ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸದ್ಯ ಅವರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಿದಾಗ ಅನಿರೀಕ್ಷಿತ ಘಟನೆಗಳ ಸರಣಿಗೆ ಒಳಗಾಗಿ ಬಂಧಿಸಲ್ಪಟ್ಟಿದ್ದಾರೆ. ನನಗೆ ಬಂದಿರುವ ಮಾಹಿತಿಯ ಪ್ರಕಾರ, ಚಂದ್ರಶೇಖರ ಅವರ ಬಯೋಮೆಟ್ರಿಕ್ ಡೇಟಾ, ಹೆಬ್ಬೆರಳ ಗುರುತನ್ನು ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸುವ ಪ್ರಕ್ರಿಯೆ ವೇಳೆ ಎರಡು ಬಾರಿ ಸೆರೆಹಿಡಿಯಲಾಗಿದೆ. ತದನಂತರ ಅವರಿಗೆ ಅರೇಬಿಕ್ ಭಾಷೆಯಲ್ಲಿ ಸಂದೇಶವೊಂದು ಬಂದಿದೆ. ಭಾಷೆ ತಿಳಿಯದೇ ಅವರು ಅದನ್ನು ಕ್ಲಿಕ್ ಮಾಡಿದ್ದಾರೆ. ಬಳಿಕ ಅವರಿಗೆ ತಮ್ಮ ಸಿಮ್ ಕಾರ್ಡ್ ವಿವರ ನೀಡುವಂತೆ ಕರೆ ಬಂದಿದೆ. ಕರೆ ಮಾಡಿದವರೊಂದಿಗೆ ಅವರ OTP (ಒಂದು-ಬಾರಿ ಪಾಸ್‌ವರ್ಡ್) ಹಂಚಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಯ ಬಳಿಕ ಅವರು ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಡಿಕೊಂಡಿರುವ ಹ್ಯಾಕರ್‌ಗಳು ಅವರ ಹೆಸರಿನಲ್ಲಿ ವಂಚನೆಯ ಬ್ಯಾಂಕ್ ಖಾತೆ ತೆರೆದಿದ್ದಾರೆ. ಸ್ಥಳೀಯ ಮಹಿಳೆಯ ಖಾತೆಯಿಂದ ಅನಧಿಕೃತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ಹಣವನ್ನು ತ್ವರಿತವಾಗಿ ವಿದೇಶಕ್ಕೆ ರವಾನಿಸಲಾಗಿದೆ. ಇದರ ಪರಿಣಾಮ, ಚಂದ್ರಶೇಖರ ಅವರನ್ನು ಹಣ ವರ್ಗಾವಣೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಸ್ತುತ ರಿಯಾದ್ನ ಲಾಬನ್ ಉಪನಗರ ಠಾಣೆ ಪೊಲೀಸರ ವಶದಲ್ಲಿದ್ದಾರೆ. ಪೊಲೀಸ್ ಕಸ್ಟಡಿಯಿಂದ ಚಂದ್ರಶೇಖರ ಮುಜೂರ್ ಅವರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಪತ್ರದ ಮೂಲಕ ಆಗ್ರಹಿಸಿದ್ದಾರೆ.