ಉಪ್ಪಿನಂಗಡಿ(ದಕ್ಷಿಣ ಕನ್ನಡ):ಅದು ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ. ಅದರ ದುಸ್ಥಿತಿ ನೋಡಿದ್ರೆ ಇಲ್ಲಿ ಸಂಚರಿಸುವ ವಾಹನ ಸವಾರರು ಪ್ರಸವವೇದನೆ ಅನುಭವಿಸದೇ ಇರಲಾರರು. ಅಷ್ಟಕ್ಕೂ ಅಲ್ಲಿ ಈಗಾಗಲೇ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಜನರು ನೋವುಂಡಿದ್ದಾರೆ. ಇದೆಲ್ಲವನ್ನು ಕಂಡ ತಾಲೂಕಿನ ಅಮ್ಮ-ಮಗಳು ತಾವೇ ಮುಂದೆ ನಿಂತು ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.
ಹೌದು, ತಾಯಿ-ಮಗಳು ಸೇರಿಕೊಂಡು ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳಿಗೆ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಕಿಂಡೋವಿನ ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಸ್ಥಳೀಯ ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ಅವರ ತಾಯಿ ಸೇಸಮ್ಮ ಸೇರಿಕೊಂಡು ಮಣ್ಣು ಮತ್ತು ಕಲ್ಲುಗಳಿಂದ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.