ಸುಳ್ಯ(ದಕ್ಷಿಣ ಕನ್ನಡ):ತಾಯಿ ಮತ್ತು ಮಗಳು ಒಟ್ಟಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಘಟನೆಗೆ ಸುಳ್ಯ ಸಾಕ್ಷಿಯಾಗಿದೆ. ಜಯನಗರದ ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಪುತ್ರಿ ತ್ರಿಶಾ ಪರೀಕ್ಷೆ ಪಾಸ್ ಮಾಡಿದ್ದಾರೆ. ಸುಳ್ಯದ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆಯೂ ಅಧ್ಯಯನ ನಡೆಸಿದ್ದರು. ಖಾಸಗಿಯಾಗಿ ಕಲಾ ವಿಭಾಗದಲ್ಲಿ ಶಿಕ್ಷಣ ಪಡೆದು ತಮ್ಮ 45ನೇ ವರ್ಷದಲ್ಲಿ ಪಿಯುಸಿ ಉತ್ತೀರ್ಣರಾಗಿದ್ದಾರೆ.
ತ್ರಿಶಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದಿದ್ದರು. 25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಎರಡು ವರ್ಷಗಳ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಬರೆದಿದ್ದರು.