ಮಂಗಳೂರು: 23 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅಜರುದ್ದೀನ್ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ನ ಕಾಟಿಪಳ್ಳ ಗ್ರಾಮದ ಕೃಷ್ಣಾಪುರ ನಿವಾಸಿ ಅಜರುದ್ದೀನ್ ಯಾನೆ ಅಜರ್ ಯಾನೆ ನಾಥು (29) ಬಂಧಿತ. ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ. ಜಾಮೀನು ರಹಿತ ವಾರೆಂಟ್ ಕೂಡ ಇತ್ತು.
ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಆಯುಕ್ತ ಮನೋಜ್ ಕುಮಾರ್ ನಿರ್ದೇಶನದಂತೆ ಬುಧವಾರ ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಅಜಿತ್ ಮ್ಯಾಥ್, ಮಣಿಕಂಠ, ಕಾರ್ತಿಕ್ ಅವರ ತಂಡ ಆರೋಪಿಯನ್ನು ಸೆರೆಹಿಡಿದಿದೆ.