ಬೆಳ್ತಂಗಡಿ(ದಕ್ಷಿಣ ಕನ್ನಡ): ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದಿದೆ. ಬೆಂಗಳೂರಿನ ನಿವಾಸಿಯ ವಿದ್ಯಾರ್ಥಿನಿಯೊಬ್ಬಳು ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದಳು. ಕಳೆದ ವಾರ ಕಾಲೇಜು ಕೊನೆಗೊಂಡಿದ್ದು, ಆ.02ರಂದು ರಾತ್ರಿ ತನ್ನ ಊರಾದ ಬೆಂಗಳೂರಿಗೆ ತೆರಳಲು ಉಜಿರೆಯಿಂದ ಪರಿಚಯಸ್ಥ ಆಟೋ ಚಾಲಕನಿಗೆ ಕರೆ ಮಾಡಿದ್ದಳು.
ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ರಾತ್ರಿ ಸುಮಾರು 9 ಗಂಟೆಗೆ ಅವಳನ್ನು ಡ್ರಾಪ್ ಮಾಡಿ ಹಿಂದಿರುಗುವಾಗ ಅಪರಿಚಿತ ಯುವಕರ ತಂಡವೊಂದು ಪ್ರಶ್ನಿಸಿ, ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಆಟೋ ಚಾಲಕನನ್ನು ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದೆ.
ಚಾಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಧರ್ಮಸ್ಥಳ ಸುತ್ತಮುತ್ತಲಿನ ಸಿಸಿಕ್ಯಾಮರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ನೈತಿಕ ಪೊಲೀಸ್‌ಗಿರಿ, ಐವರ ಬಂಧನ:ಕಾರಿನಲ್ಲಿ ತೆರಳುತ್ತಿದ್ದ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ನಡೆಸಿದ ಐವರನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿಯ ಕಾರ್ಕಳದಲ್ಲಿ ಬುಧವಾರ ನಡೆದಿದೆ. ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಚಿತ್ ಸಫಲಿಗ ಆರೋಪಿಗಳು.
ಮಂಗಳೂರಿನ ಕಾಲೇಜೊಂದರ ನಾಲ್ವರು ವೈದ್ಯರು ಮತ್ತು ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಾಳ ಎಸ್.ಕೆ ಬಾರ್ಡರ್ ಬಳಿಯಿಂದ ಆರೋಪಿಗಳು ಇವರ ಕಾರು ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ ಮಹಿಳೆಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳೂರಿನಿಂದ ಶೃಂಗೇರಿಗೆ ತೆರಳಿ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದವರನ್ನು ಹಿಂಬಾಲಿಸಿ ಅಡ್ಡಗಟ್ಟಿ ನಿಂದಿಸಿದ್ದಾರೆ ಎನ್ನಲಾಗಿದೆ.
ಬೀಚ್ಗೆ ಹೋಗಿದ್ದ ವಿದ್ಯಾರ್ಥಿನಿ ಮೇಲೂ ನಡೆದಿತ್ತು ನೈತಿಕ ಪೊಲೀಸ್ ಗಿರಿ: ಜುಲೈ ತಿಂಗಳಲ್ಲಿ ಪಣಂಬೂರು ಬೀಚ್ಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಯುವಕರ ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಪ್ರಕರಣ ದಾಖಲಾಗಿತ್ತು. ಮಂಗಳೂರಿನ ಮೆಡಿಕಲ್ ಕಾಲೇಜೊಂದರ 6 ವಿದ್ಯಾರ್ಥಿಗಳು ಶುಕ್ರವಾರ ಸಂಜೆ 5.30ರ ಸುಮಾರಿಗೆ ಪಣಂಬೂರು ಬೀಚ್ಗೆ ಹೋಗಿದ್ದರು. ಇದೇ ವೇಳೆ, ಯುವಕರು ಬೈಕ್ನಲ್ಲಿ ಬಂದಿದ್ದರೆ, ಯುವತಿಯರು ಬಸ್ನಲ್ಲಿ ತೆರಳಿದ್ದರು.ಇವರು ಬೀಚ್ನಲ್ಲಿದ್ದ ವೇಳೆ ಇಬ್ಬರು ಅಪರಿಚಿತರು ಇವರ ಚಲನವಲನಗಳನ್ನು ಗಮನಿಸುತ್ತ, ಮೊಬೈಲ್ ಫೋನ್ಗಳಲ್ಲಿ ವಿಡಿಯೋ ಮಾಡಿದ್ದಾರೆ.
ವಿದ್ಯಾರ್ಥಿಗಳು ಇದನ್ನು ಗಮನಿಸಿದರೂ ಅದನ್ನು ಪ್ರಶ್ನಿಸದೆ ತಮ್ಮ ಪಾಡಿಗೆ ತಾವು ಇದ್ದರು. ನಂತರ ಯುವಕರು ಬೈಕ್ನಲ್ಲಿ, ಯುವತಿಯರು ಬಸ್ನಲ್ಲಿ ಹಿಂದಿರುಗಿದ್ದಾರೆ.ನಾಲ್ವರು ವಿದ್ಯಾರ್ಥಿನಿಯರ ಪೈಕಿ ಓರ್ವ ಯುವತಿ ನಗರದ ಚಿಲಿಂಬಿಯಲ್ಲಿ ಬಸ್ನಿಂದ ಇಳಿದು ತನ್ನ ಪಿಜಿ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಣಂಬೂರು ಬೀಚ್ನಲ್ಲಿ ಹಿಂಬಾಲಿಸುತ್ತಿದ್ದ ಅದೇ ಅಪರಿಚಿತರು ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಯುವತಿಗೆ ಬೆದರಿಸಿದ್ದಾರೆ.
ಇದನ್ನೂ ಓದಿ:Mangaluru crime: ಮಂಗಳೂರಿನಲ್ಲಿ ಪತ್ರಕರ್ತನ ಮೇಲೆ ನೈತಿಕ ಪೊಲೀಸ್ ಗಿರಿ.. ಇಬ್ಬರ ಬಂಧನ