ಕಡಬ(ಮಂಗಳೂರು) : ಕೇವಲ 13 ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ಶಾಲಾ ಕಟ್ಟಡ ಬಾಗಿ ಬೆಂಡಾಗಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದ್ದರೂ ಸಹ ಯಾವೊಬ್ಬ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸದ ಕಾರಣ, ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಕಡಬ ತಾಲೂಕಿನ ಮೂರಾಜೆ ಕೊಪ್ಪ ಸರ್ಕಾರಿ ಶಾಲಾ ಮಕ್ಕಳಿಗೆ ಒದಗಿಬಂದಿದೆ.
ಮಂಗಳೂರು ಜಿಲ್ಲೆಯ ಕಡಬ ತಾಲೂಕಿನ ಮೂರಾಜೆ ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಭಿವೃದ್ದಿ ವಂಚಿತವಾಗಿದೆ. ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರೂ ಸಹ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಲೆಯತ್ತ ಗಮನ ಹರಿಸುತ್ತಿಲ್ಲ. ಶಾಲಾ ಕಟ್ಟಡ ಕೂಡಲೇ ತೆರವುಮಾಡಿ ಹೊಸ ಕಟ್ಟಡ ನಿರ್ಮಿಸುತ್ತೇವೆ ಎಂಬ ಸುಳ್ಯ ಶಾಸಕ ಎಸ್. ಅಂಗಾರರ ಮಾತು ಬರೀ ಮಾತಾಗಿಯೇ ಉಳಿದಿದೆ.
ಕಡಬ ಗ್ರಾಮದ ಮೂರಾಜೆ ಕೊಪ್ಪ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಮಾರು 40 ವಿದ್ಯಾರ್ಥಿಗಳಿರುವ ಶಾಲೆ ಆರಂಭಗೊಂಡು ಕೇವಲ 15 ವರ್ಷಗಳಷ್ಟೇ ಆಗಿದೆ. ಸುಮಾರು 13 ವರ್ಷಗಳ ಹಿಂದೆ ಶಾಲೆಯ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಶಾಲೆಯ ತರಗತಿಯ ಕೊಠಡಿ ಚಾವಣಿ ಕಳಪೆ ಕಾಮಗಾರಿಯಿಂದಾಗಿ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ. ಛಾವಣಿ ಭಾಗಿರುವುದರಿಂದ ಗೋಡೆಯೂ ಬಿರುಕುಬಿಟ್ಟು ಅಪಾಯವನ್ನು ಆಹ್ವಾನಿಸುತ್ತಿದೆ.
ಶಾಲೆಯ ಕಟ್ಟಡ ಶಿಥಿಲಗೊಂಡಿರುವ ವಿಚಾರವನ್ನು ಕಡಬ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದ್ದ ಸ್ಥಳೀಯ ಮುಂದಾಳು ಸುರೇಂದ್ರ ಅವರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸದಂತೆ ಮುಂಜಾಗರೂಕತೆ ವಹಿಸಬೇಕೆಂದು ಆಗ್ರಹಿಸಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಪಂಚಾಯ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಸರಿಪಡಿಸುತ್ತೇವೆ ಎಂಬ ಮಾತು ಹೇಳಿ ಕಾಲ್ಕಿತ್ತಿದ್ದಾರೆ. ಆದರೆ ಫಲ ಮಾತ್ರ ಇನ್ನೂ ಶೂನ್ಯ.
ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳೂ ಒಂದೊಂದಾಗಿ ಮುಚ್ಚುತ್ತಿವೆ. ಚಾಲನೆಯಲ್ಲಿರುವ ಶಾಲೆಗಳಿಗಾದರೂ ಸರ್ಕಾರ ಒತ್ತು ನೀಡಿ ಅಭಿವೃದ್ದಿಗೆ ಮುಂದಾದರೆ ಕನ್ನಡ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂಬುದು ಸಾರ್ವಜನಿಕರ ಮಾತು.