ಮಂಗಳೂರು: ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಮುಂಗಾರು ಮಳೆಯ ಆಗಮನವಾಯಿತು. ವಾಡಿಕೆಯಂತೆ ಜೂನ್ 1ಕ್ಕೆ ಬರಬೇಕಿದ್ದ ಮುಂಗಾರು ತೀವ್ರ ವಿಳಂಬವಾಗಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಇಂದು ಬೆಳಗ್ಗೆ ಆರಂಭವಾದ ಮಳೆ ಖುಷಿ ಕೊಟ್ಟಿತು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಬಿಪರ್‌ಜಾಯ್ ಚಂಡಮಾರುತದ ಪ್ರಭಾವದಿಂದ ಇಂದಿನಿಂದ ಮಳೆ ಆರಂಭವಾಗಿದೆ. ಕೇರಳ ಭಾಗದಿಂದ ಉತ್ತರಕ್ಕೆ ಚಲಿಸುತ್ತಿರುವ ಬಿಪರ್‌ಜಾಯ್ ಚಂಡಮಾರುತದ ಪ್ರಭಾವದಿಂದ ಬುಧವಾರದಿಂದ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ಎರಡು ದಿನಗಳ ಕೆಲ ಹೊತ್ತು ಮೋಡಗಳು, ಹನಿ ಮಳೆ ಬಿಟ್ಟರೆ ಭಾರಿ ಮಳೆ ಬಂದಿರಲಿಲ್ಲ. ಆದರೆ ಇಂದು ಮುಂಜಾನೆಯಿಂದ ಮಳೆ ಸಿಂಚನವಾಗಿದೆ.
ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದರು. ಮಂಗಳೂರು ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ಹಲವೆಡೆ ಎತ್ತರದ ಪ್ರದೇಶಗಳಿಗೆ ನೀರಿನ ಸರಬರಾಜು ಆಗುವಲ್ಲಿ ವ್ಯತ್ಯಯ ಆಗಿದೆ. ಜೂನ್ 1 ರಂದು ಮುಂಗಾರು ಆಗಮನವಾಗಿದ್ದರೆ, ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಅಕಾಲಿಕ ಮಳೆ ಕೈಕೊಟ್ಟಿದ್ದರಿಂದ ಗದ್ದೆಗಳನ್ನು ಬಿತ್ತನೆಗೆ ಸಜ್ಜು ಮಾಡಲು ಆಗಿಲ್ಲ. ಆದರೆ ಮುಂಗಾರು ವಿಳಂಬವಾಗಿದ್ದು, ಕೃಷಿ ಚಟುವಟಿಕೆ ಹಮ್ಮಿಕೊಳ್ಳಲು ಮಳೆಗಾಗಿ ರೈತರು ಕಾಯುತ್ತಿದ್ದಾರೆ.
ಮಂಗಳೂರು ಜನರು ನಿಟ್ಟುಸಿರು:ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಹಲವು ಶಾಲಾ, ಕಾಲೇಜು, ಹಾಸ್ಟೆಲ್‌ಗಳಲ್ಲಿ ನೀರಿನ ಹಾಹಾಕಾರದಿಂದಾಗಿ ಟ್ಯಾಂಕರ್ ನೀರಿನ ಮೊರೆ ಹೋಗುವಂತಾಗಿದೆ. ಕಟೀಲು, ಶೃಂಗೇರಿ ಸೇರಿದಂತೆ ಪುಣ್ಯ ಕ್ಷೇತ್ರಗಳಲ್ಲಿ ಕೂಡ ನೀರಿಗೆ ಹಾಹಾಕಾರ ಶುರುವಾಗಿದ್ದು, ಭಕ್ತರು ಪರದಾಡುವಂತಾಗಿದೆ. ಜೂನ್ 9 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ.