ಮಂಗಳೂರು: ಅವಧಿಪೂರ್ವ ಜನಿಸಿದ ಮಗುವಿಗೆ ಎದೆಹಾಲಿನ ಕೊರತೆಯಿಂದ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮನವಿಗೆ ಸ್ಪಂದಿಸಿದ ಅಮ್ಮಂದಿರು ಮಗುವಿನ ಎದೆಹಾಲಿನ ಕೊರತೆಯನ್ನು ನೀಗಿಸಿದರು. 24 ಗಂಟೆಗಳಲ್ಲಿ 25 ಕರೆಗಳು ಬಂದು ಎದೆಹಾಲು ಹಂಚಿಕೊಳ್ಳುವ ಭರವಸೆ ನೀಡಿದ್ಧಾರೆ.
ಮಂಗಳೂರಿನ ಕಾರ್ ಸ್ಟ್ರೀಟ್ನ ಗರ್ಭಿಣಿಯೊಬ್ಬರು ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಇವರು ಗರ್ಭಿಣಿಯಾಗಿದ್ದಾಗ ಪ್ರಿಕ್ಲಾಂಪ್ಸಿಯ ಎಂಬ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ ತಾಯಿ ಜೊತೆಗೆ ಮಗುವಿಗೂ ಪ್ರಾಣಾಪಾಯ ಇತ್ತು. ಆದ ಕಾರಣ ಏಳು ತಿಂಗಳ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಗಿತ್ತು.
ಮಗು ಜನಿಸಿದ ಸಂದರ್ಭದಲ್ಲಿ 900 ಗ್ರಾಂ ತೂಗುತ್ತಿತ್ತು. ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ಮಗುವಿನ ತೂಕ 1.4 ಕೆಜಿ ಆಗಿದೆ. ಅವಧಿಪೂರ್ವ ಹೆರಿಗೆಯಿಂದ ತಾಯಿಗೆ ಎದೆಹಾಲಿನ ಕೊರತೆ ಕಾಣಿಸಿಕೊಂಡಿದ್ದರೆ, ಹಸುಗೂಸಿಗೆ ಎದೆಹಾಲು ಅವಶ್ಯಕವಾಗಿತ್ತು. ಮಗುವಿಗೆ ಪ್ರತಿ ಎರಡು ಗಂಟೆಗೊಮ್ಮೆ 30 ಮಿಲಿ ಲೀಟರ್ ಹಾಲು ಕುಡಿಸಬೇಕಿತ್ತು.