ಮಂಗಳೂರು:ಭೂ ಕುಸಿತ ಸಂಭವಿಸಿದಾಗ ಮುಂಜಾಗ್ರತಾ ಹಿನ್ನೆಲೆಯಲ್ಲಿ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂದು ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಅದ್ಯಪಾಡಿ ಎಂಬಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.
ವಿವಿಧ ಇಲಾಖೆಗಳ ತಂಡದಿಂದ ಅಣಕು ಪ್ರದರ್ಶನ ಎನ್ಡಿಆರ್ಎಫ್, ಜಿಲ್ಲಾಡಳಿತದ ಪ್ರಕೃತಿ ವಿಕೋಪ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕೈಗೊಂಡ ಭೂಕುಸಿತ ನಿರ್ವಹಣಾ ಸಂಬಂಧಿ ಅಣಕು ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂಬ ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಳೆ ಸಂದರ್ಭ ಭೂಕುಸಿತ ಸಂಭವಿಸಿದಾಗ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂದು ಮಾಹಿತಿ ಪಡೆಯಲು ಜೂ.17ರಂದು ಎಲ್ಲ ವಿಭಾಗಗಳ ಅಧಿಕಾರಿಗಳ ಸಭೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಭೂಕುಸಿತವಾದಾಗ ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂಬ ಅಣಕು ಪ್ರದರ್ಶನ ನಡೆಯಿತು.
ಇದೇ ವೇಳೆ, ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಭೂಕುಸಿತವಾದಾಗ ಮುಂಜಾಗ್ರತಾ ಕ್ರಮವಾಗಿ ಯಾವ ರೀತಿ ಕಾರ್ಯಾಚರಣೆ ನಡೆಸಬಹುದು ಎಂಬ ಅಣಕು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಆಂಧ್ರಪ್ರದೇಶದ ಗುಂಟೂರಿನ ಎನ್ಡಿಆರ್ಎಫ್ ತಂಡದೊಂದಿಗೆ ನಮ್ಮ ತಂಡ ಕೈಜೋಡಿಸಿ ಕೆಲಸ ಮಾಡಿದ್ದು, ಇದರಿಂದ ನಮಗೆ ಸಾಕಷ್ಟು ಅನುಭವವಾಯಿತು. ಕಳೆದ ಒಂದುವರೆ ವರ್ಷಗಳಿಂದ ವಿಪತ್ತು ನಿರ್ವಹಣೆಯಲ್ಲಿ ಸಾಕಷ್ಟು ಕೆಲಸ ನಿರ್ವಹಿಸಿದ್ದೇವೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಸಂದರ್ಭ ಕಾರ್ಯಾಚರಣೆ ಮಾಡುವ ನಮ್ಮ ಎಲ್ಲಾ ಇಲಾಖೆಗಳಿಗೂ ಬೇಕಾದ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಿದ್ದೇವೆ ಎಂದು ಹೇಳಿದರು.
ಅಲ್ಲದೆ ನಮ್ಮ ತಂಡಗಳು ಕಳೆದ ಬಾರಿಯ ಕೊಡಗಿನಲ್ಲಿ ನಡೆದ ಭೂಕುಸಿತ ಹಾಗೂ ದ.ಕ.ದಲ್ಲಿ ನಡೆದ ನೆರೆ ಅವಾಂತರದ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಆದ್ದರಿಂದ ಮುಂದಿನ ಮಳೆಗಾಲದಲ್ಲಿ ನಾವು ಇಂತಹ ವಿಪತ್ತುಗಳನ್ನ ಯಶಸ್ವಿಯಾಗಿ ಎದುರಿಸಬಲ್ಲೆವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.