ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನಾ ನಿಗ್ರಹ ತಂಡ ರಚಿಸಲಾಗಿದ್ದು, ಇಂದು ಉಗ್ರರನ್ನು ಮಟ್ಟ ಹಾಕುವ ಬಗ್ಗೆ ಅಣಕು ಕಾರ್ಯಾಚರಣೆ ಮಾಡಲಾಯಿತು.
ಮಂಗಳೂರಿನ 35 ಪೊಲೀಸ್ ಸಿಬ್ಬಂದಿಗೆ ಭಯೋತ್ಪಾದನಾ ನಿಗ್ರಹದ ತರಬೇತಿ ನೀಡಲಾಗಿದ್ದು, ತರಬೇತಿ ಮುಗಿಸಿದ ತಂಡವು ಮಂಗಳೂರಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದೆ. 15 ಸಿಬ್ಬಂದಿಗಳನ್ನು ಒಳಗೊಂಡ ಎರಡು ಭಯೋತ್ಪಾದನಾ ನಿಗ್ರಹ ತಂಡವನ್ನು ರಚಿಸಲಾಗಿದ್ದು, ಈ ಸಿಬ್ಬಂದಿಗಳ ರಜೆಯ ವೇಳೆ ಉಳಿದ ಐದು ಮಂದಿ ಕರ್ತವ್ಯದಲ್ಲಿರಲಿದ್ದಾರೆ.
ಕಟ್ಟಡದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಜೀವಂತ ಹಿಡಿಯುವ ಅಣಕು ಕಾರ್ಯಾಚರಣೆ ಇದಾಗಿತ್ತು. ರಕ್ಷಣಾ ಸಿಬ್ಬಂದಿ ಕಟ್ಟಡದಲ್ಲಿರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೂವರು ಉಗ್ರರನ್ನು ಬಂಧಿಸಿದರು. ಇದರ ಜೊತೆಗೆ ಈ ತಂಡದಿಂದ ವಿವಿಧ ರೀತಿಯ ಯುದ್ಧ ಕೌಶಲ್ಯಗಳ ಪ್ರದರ್ಶನ ನಡೆಯಿತು.