ಮಂಗಳೂರು (ದಕ್ಷಿಣ ಕನ್ನಡ): ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಏಕಾಗ್ರತೆ ಬೇಕು. ದೇವರ ಪ್ರಾರ್ಥನೆಯ ವೇಳೆ ಮನಸ್ಸಿನಲ್ಲಿರುವುದನ್ನು ಪ್ರಾರ್ಥಿಸಬೇಕು. ಆದರೆ ಇತ್ತೀಚೆಗೆ ಮೊಬೈಲ್ ಫೋನ್ಗಳು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಿರಿ ಕಿರಿಯನ್ನುಂಟು ಮಾಡಿದೆ. ಇದೀಗ ಮೊಬೈಲ್ ಜಮಾನ. ಮೊಬೈಲ್ ಫೋನ್ ಇಲ್ಲದೆ ಮನುಷ್ಯನಿಗೆ ಜೀವನವೇ ಇಲ್ಲದಂತಾಗಿದೆ. ಪ್ರತಿಕ್ಷಣವು ಮನುಷ್ಯನಿಗೆ ಮೊಬೈಲ್ ಬೇಕೆ ಬೇಕು. ಕೇವಲ ಸಂವಹನಕ್ಕೆ ಮಾತ್ರವಲ್ಲದೆ ಮನೋರಂಜನೆಗೂ ಕೂಡ. ಆದರೆ ಈ ಮೊಬೈಲ್ ದೇವಸ್ಥಾನಕ್ಕೆ ಪ್ರಾರ್ಥನೆಗೆ ಬರುವ ಭಕ್ತರಿಗೆ ಬಹಳ ತೊಂದರೆ ಉಂಟುಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ.
ಆದೇಶದಲ್ಲಿ ಏನಿದೆ?:ದೇವಾಲಯಗಳ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿದೆ. ಇದರಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ಮೊಬೈಲ್ ಫೋನ್ ಬಳಕೆಯ ಶಬ್ದಗಳಿಂದ ದೇವಾಲಯದ ಸಿಬ್ಬಂದಿಗಳಿಗೂ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರಿಗೂ ಏಕ ಮನಸ್ಸಿನಿಂದ ಧ್ಯಾನ ಪೂಜಾದಿಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ದೇವರ ದರ್ಶನದ ಸಮಯದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ, ದೇವರ ದರ್ಶನ ಮಾಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ದೇವಾಲಯಗಳ ಸೂಚನಾ ಫಲಕಗಳಲ್ಲಿ ಅಗತ್ಯ ಸೂಚನೆಗಳನ್ನು ಪ್ರಕಟಿಸುವಂತೆ ತಿಳಿಸಲಾಗಿದೆ.
ಕರಾವಳಿಯ ದೇವಸ್ಥಾನಗಳಲ್ಲಿ ಮೊದಲೇ ಪಾಲನೆ:ದೇವಸ್ಥಾನದ ಒಳಗೆ ಮೊಬೈಲ್ ಬಳಕೆ ನಿಷೇಧ ಮಾಡಿರುವ ಆದೇಶವನ್ನು ನಿನ್ನೆ ರಾಜ್ಯ ಸರ್ಕಾರ ಮಾಡಿದೆ. ಈ ಆದೇಶ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಪಾಲನೆಯಾಗಬೇಕಿದೆ. ಆದರೆ ಕರಾವಳಿಯ ಹೆಚ್ಚಿನ ದೇವಸ್ಥಾನಗಳಲ್ಲಿ ಇದನ್ನು ಮೊದಲಿನಿಂದಲೂ ಪಾಲನೆ ಮಾಡಲಾಗುತ್ತಿದೆ.