ಮಂಗಳೂರು:ನಗರದ ಪ್ರಸಿದ್ಧ ದೇವಳಗಳಾದ ಶ್ರೀ ಮಂಗಳಾದೇವಿ ಹಾಗೂ ಬೋಳಾರ ಹಳೆಕೋಟೆ ಮಾರಿಯಮ್ಮ ದೇವಸ್ಥಾನಗಳಿಗೆ ಸಂಬಂಧಪಟ್ಟ ಗುಜ್ಜರಕೆರೆಯ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಇದೇ ರೀತಿ ನಗರ ದಕ್ಷಿಣ ವ್ಯಾಪ್ತಿಯಲ್ಲಿ ಅನೇಕ ಪುರಾತನ ಕೆರೆಗಳು ನಾಮಾವಶೇಷವಾಗಿದ್ದು, ಶೀಘ್ರದಲ್ಲಿಯೇ ಉಳಿದ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಮುಂದಿನ ಪೀಳಿಗೆಗೆ ನೀಡಲಾಗುತ್ತದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಲು ಸ್ಥಳಕ್ಕೆ ಆಗಮಿಸಿದ ವೇಳೆ ಮಾತನಾಡಿದ ಶಾಸಕರು, ಗುಜ್ಜರಕೆರೆ ಅಭಿವೃದ್ಧಿ ಕುರಿತು ಅನೇಕ ವರ್ಷಗಳಿಂದ ಇಲ್ಲಿನ ನಾಗರಿಕರು ಮನವಿ ಸಲ್ಲಿಸುತ್ತಿದ್ದಾರೆ. ಕೆರೆಯ ವಿಚಾರದಲ್ಲಿ ಧಾರ್ಮಿಕತೆಗೆ ಸಂಬಂಧಿಸಿದಂತೆ ಈ ಪರಿಸರದ ಜನರು ಅನನ್ಯ ಸಂಬಂಧ ಹೊಂದಿದ್ದಾರೆ. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿ ಸೇರಿಸಿ ಮಾದರಿ ಕೆರೆಯನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಹೇಳಿದರು.
ಮಾದರಿ ಕೆರೆಯಾಗಿ ಗುಜ್ಜರಕೆರೆ ಅಭಿವೃದ್ಧಿ; ಶಾಸಕ ಕಾಮತ್
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಈಗಾಗಲೇ ಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಸರಿ ಸುಮಾರು 15 ಅಡಿಗಳಷ್ಟು ಆಳ ಹೂಳು ತುಂಬಿಕೊಂಡಿದ್ದು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ಬಳಿಕ ನೀರು ಕಲುಷಿತಗೊಳ್ಳದಂತೆ, ತಡೆಗೋಡೆಗಳ ದುರಸ್ತಿ ಮಾಡಲಾಗುತ್ತದೆ. ಅಲ್ಲದೆ ಕೆರೆಯ ನೀರು ಜನ ಉಪಯೋಗಕ್ಕೆ ಯೋಗ್ಯವಾಗುವ ರೀತಿಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ರೇವತಿ ಶ್ಯಾಮ್ ಸುಂದರ್, ಸುಧೀರ್ ಶೆಟ್ಟಿ ಕಣ್ಣೂರು, ಭಾನುಮತಿ, ಶೈಲೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ದೀಪಕ್ ಪೈ, ಭಾರತಿ ರಾವ್, ಯಶವಂತ್, ರಾಜೇಂದ್ರ, ದಿನೇಶ್, ಶಿವಪ್ರಸಾದ್, ಪ್ರಮೋದ್, ಪುಷ್ಪರಾಜ್ ಶೆಟ್ಟಿ, ಸುನಿಲ್ ಸಾಲ್ಯಾನ್, ದಿನೇಶ್, ಸುಜಾತಾ ಆಳ್ವಾ, ಹೇಮ ಅರಕೆರೆ, ಅನಿಲ್ ಕೊಟ್ಟಾರಿ, ಅಮಿತ್ ಶೆಟ್ಟಿ, ಗುಜ್ಜರಕೆರೆ ತೀರ್ಥ ಸಮಿತಿಯ ಪ್ರಮುಖರಾದ ನೇಮು ಕೊಟ್ಟಾರಿ, ತಾರನಾಥ ಶೆಟ್ಟಿ, ಯೋಗಿಶ್ ಕುಮಾರ್, ಸಿ.ಪಿ ದಿನೇಶ್, ಉದಯ್ ಶಂಕರ್, ಉಮಾ ಶಂಕರ್, ನಾರಾಯಣ ಶೆಟ್ಟಿ, ಮಾಧವ ವೆಂಕಟೇಶ್ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.