ಉಳ್ಳಾಲ:ಉಳ್ಳಾಲ ದರ್ಗಾ ವಠಾರದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಲಾದ ಕುಡಿಯುವ ನೀರಿನ ತೆರೆದ ಬಾವಿ ಹಾಗೂ ಮಿಲ್ಲತ್ ನಗರ ಮತ್ತು ಬಂಡಿಕೊಟ್ಯ ಪ್ರದೇಶಗಳಿಗೆ ನೂತನ ಬಾವಿಯಿಂದ ನೀರು ಸರಬರಾಜು ಯೋಜನೆಯನ್ನು ಶಾಸಕ ಯು.ಟಿ. ಖಾದರ್ ಉದ್ಘಾಟಿಸಿದರು.
ಕುಡಿಯುವ ನೀರಿನ ತೆರೆದ ಬಾವಿ ಉದ್ಘಾಟಿಸಿದ ಶಾಸಕ ಯು.ಟಿ. ಖಾದರ್ ನಂತರ ಮಾತನಾಡಿದ ಖಾದರ್, ಉಳ್ಳಾಲ ನಗರಸಭಾ ವ್ಯಾಪ್ತಿಯ ಬಂಡಿಕೊಟ್ಯ, ಮಿಲ್ಲತ್‍ನಗರದ ನೀರಿನ ಸಮಸ್ಯೆಗೆ ದರ್ಗಾದೊಂದಿಗೆ ದಾನಿಗಳ ಸಹಕಾರ ಶ್ಲಾಘನೀಯವಾಗಿದೆ. ಈ ವ್ಯಾಪ್ತಿಯಲ್ಲಿ ತೆರೆದ ಬಾವಿ ನಿರ್ಮಾಣ ಕಾರ್ಯ ನಡೆಯಲಿದ್ದು, ಮುಂದಿನ ಒಂದು ವರ್ಷದೊಳಗೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೇತ್ರಾವತಿ ನದಿಯಿಂದ ನಿರಂತರ ನೀರು ಪೂರೈಕೆ ಕಾರ್ಯ ಆರಂಭಗೊಳ್ಳಲಿದೆ ಎಂದರು.
ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಉಳ್ಳಾಲ್ ಮಾತನಾಡಿ, ಉಳ್ಳಾಲ ದರ್ಗಾ ಅಧೀನದಲ್ಲಿ ಕಳೆದ ಹಲವು ವರ್ಷಗಳಿಂದ ನೀರು ಪೂರೈಸುತ್ತಿದ್ದು, ಹೆಚ್ಚಿನ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ದರ್ಗಾ ಪ್ರದೇಶದಲ್ಲಿ ಬಾವಿ ತೆಗೆಯಲು ದಾನಿಗಳು ಮುಂದೆ ಬಂದಿದ್ದರಿಂದ ನೂತನ ಬಾವಿ ನಿರ್ಮಾಣ ಮಾಡಿದ್ದು, ಇದೀಗ ನೀರು ಪೂರೈಸುವ ಕಾರ್ಯ ನಡೆಯಲಿದೆ ಎಂದ ಅವರು ಜನರು ಕುಡಿಯುವ ನೀರನ್ನು ಪೋಲು ಮಾಡದೆ ಉಳ್ಳಾಲ ನಗರಸಭೆ ಈ ನೀರನ್ನು ಈ ವ್ಯಾಪ್ತಿಯ ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತೆರೆದ ಬಾವಿ ನಿರ್ಮಾಣದ ದಾನಿಗಳಾದ ಯು.ಎಮ್. ಅಹಮ್ಮದ್ ಕಬೀರ್ ಚಾಯಬ್ಬ ಅವರನ್ನು ಸನ್ಮಾನಿಸಲಾಯಿತು.