ಬೆಳ್ತಂಗಡಿ:ಬಿಜೆಪಿ ಮುಖಂಡರು ನನ್ನ ಮೇಲೆ ಮಾಡಿರುವ ರಾಗಿ ಕಳ್ಳತನ ಆರೋಪದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ, ಆಣೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರು ಶ್ರೀಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಅರಸೀಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದರು.
ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಶಾಸಕರು ಮಂಜುನಾಥ ಸ್ವಾಮಿ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಬಿಜೆಪಿ ಮುಖಂಡರು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ಹಾಗಾಗಿ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರೂ ಸ್ವಾಮಿಯವರ ಮುಂದೆ ಬಂದು ಪ್ರಮಾಣ ಮಾಡಲಿ ಅಥವಾ ದಾಖಲೆಗಳನ್ನು ಬಿಡುಗಡೆ ಮಾಡಲಿ. ದಾಖಲೆಗಳನ್ನು ನೀಡಿದರೆ ಕಾನೂನು ರೀತಿಯ ಹೋರಾಟಕ್ಕೂ ನಾನು ಸಿದ್ಧ ಎಂದರು.
ಬಿಜೆಪಿ ಮುಖಂಡ ರವಿಕುಮಾರ್ ಅವರು ಸಾರ್ವಜನಿಕವಾಗಿ ನನ್ನ ಮೇಲೆ ರಾಗಿ ಕಳ್ಳ ಎಂದು ಆರೋಪ ಮಾಡಿದ್ದಾರೆ. ಆಗಲೇ ಅವರಿಗೆ ದಾಖಲೆಗಳನ್ನು ನೀಡಿ ಅಥವಾ ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬನ್ನಿ ಎಂದು ಹೇಳಿದ್ದೆ. ಆದರೆ ಆರೋಪ ಮಾಡಿದವರು ಯಾವುದಕ್ಕೂ ಬರಲಿಲ್ಲ. ಆದ್ದರಿಂದ ನಾನೇ ಕ್ಷೇತ್ರಕ್ಕೆ ಬಂದು, ನಾನು ಒಂದು ಕೆಜಿ ರಾಗಿಯನ್ನೂ ಕದ್ದಿಲ್ಲ. ನಾನು ರಾಗಿ ಕಳ್ಳ ಅಲ್ಲ ಎಂದು ಪ್ರಮಾಣ ಮಾಡಿದ್ದೇನೆ ಎಂದು ತಿಳಿಸಿದರು.