ಪುತ್ತೂರು (ದ.ಕ): ಅಧಿಕೃತ ಏಜೆನ್ಸಿಗಳ ಕೋಡ್ ಬಳಸಿ ನಕಲಿ ವಾಹನ ವಿಮೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮೆ ತಯಾರಿಸಿ ತಪ್ಪೊಪ್ಪಿಕೊಂಡಿರುವ ದಲ್ಲಾಳಿ ವಿರುದ್ಧ ತಕ್ಷಣ ದೂರು ದಾಲಿಸುವಂತೆ ಹಾಗೂ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಶಾಸಕ ಸಂಜೀವ ಮಠಂದೂರು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಕಲಿ ವಿಮೆ ಹಾವಳಿ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಆರ್‌ಟಿಓ, ವಿಮಾ ಕಂಪೆನಿ ಹಾಗೂ ಸಂಚಾರಿ ಪೊಲೀಸರ ಉಪಸ್ಥಿತಿಯಲ್ಲಿ ಸಭೆ ನಡೆಸಿದರು.
ಇದೊಂದು ಗಂಭೀರ ಸಮಸ್ಯೆ. ನಕಲಿ ವಿಮೆ ನೀಡುವುದರಿಂದ ಅಪಘಾತ ಪ್ರಕರಣಗಳು ಸಂಭವಿಸಿದ ಸಂದರ್ಭ ವಿಮಾದಾರನಿಗೆ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ಹೀಗಾಗಿ ನಕಲಿ ವಿಮೆ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಇರುವ ಜಾಲವನ್ನು ಬೇಧಿಸಬೇಕು ಎಂದು ಶಾಸಕರು ಆರ್‌ಟಿಓ ಹಾಗೂ ಸಂಚಾರಿ ಪೊಲೀಸರಿಗೆ ಸೂಚಿಸಿದರು.
ಈಗಾಗಲೇ ನನಗೂ ಕೆಲ ದೂರುಗಳು ಬಂದಿವೆ. ಅಧಿಕೃತ ಏಜೆನ್ಸಿಯ ಕೋಡ್ ದುರ್ಬಳಕೆ ಮಾಡಿಕೊಂಡು ವಾಹನ ಸವಾರರಿಗೆ ಮೋಸ ಮಾಡುವ ಪ್ರಕರಣ ಪುತ್ತೂರಿನಂತಹ ಪ್ರದೇಶದಲ್ಲಿ ಕಂಡು ಬಂದಿದ್ದು, ಬೇರೆ ಬೇರೆ ಕಡೆಗಳಲ್ಲಿ ವ್ಯಾಪಿಸಿರುವ ಅನುಮಾನ ಇದೆ. ತಪ್ಪು ಒಪ್ಪಿಕೊಂಡಿರುವ ವ್ಯಕ್ತಿಯನ್ನು ವಿಚಾರಿಸಿ ತನಿಖೆ ನಡೆಸಬೇಕು. ಈ ಬಗ್ಗೆ ಆರ್‌ಟಿಓ ಇಲಾಖೆ, ಸಂಚಾರ ಇಲಾಖೆ, ವಿಮಾ ಕಂಪೆನಿ ಜಾಗೃತವಾಗಿ ಜವಬ್ದಾರಿ ಹೊಂದಿರಬೇಕು ಎಂದರು.
ಎರಡು ದಿನಗಳ ಹಿಂದೆಯೇ ಏಜೆಂಟ್ ನಗರ ಠಾಣೆಯಲ್ಲಿ ಲಿಖಿತ ದೂರು ನೀಡಿದಾಗ ಅದನ್ನು ಸ್ವೀಕರಿಸದೆ, ಆರೋಪಿಯನ್ನು ವಿಚಾರಣೆ ನಡೆಸಿ ಬಿಡಲಾಗಿದೆ. ಎಫ್‌ಐಆರ್ ದಾಖಲಿಸಿಲ್ಲ. ಆರೋಪಿ ತಪ್ಪೊಪ್ಪಿಕೊಂಡ ಸಂದರ್ಭದಲ್ಲಿ ಸಮಗ್ರ ತನಿಖೆ ನಡೆಸುವುದು ಪೊಲೀಸರ ಜವಬ್ದಾರಿ. ಈ ಬಗ್ಗೆ ನಗರ ಠಾಣಾ ಎಸ್‌ಐ ಅವರ ಬಳಿ ವಿವರ ಕೇಳುತ್ತೇನೆ ಎಂದ ಶಾಸಕರು, ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ಗೆ ದೂರವಾಣಿ ಕರೆ ಮಾಡಿ ಮಾತನಾಡಿ, ಜಿಲ್ಲಾ ಮಟ್ಟದಲ್ಲೇ ಈ ಬಗ್ಗೆ ಕೂಲಂಕುಶ ತನಿಖೆ ನಡೆಸುವಂತೆ ಸೂಚಿಸಿದರು.
ನಕಲಿ ವಿಮೆ ವ್ಯಾಪಕವಾಗಿರುವ ಶಂಕೆ ಇದ್ದು, ಆರ್‌ಟಿಓ ಹಾಗೂ ಸಂಚಾರಿ ಪೊಲೀಸರು ಕ್ಯು ಆರ್ ಕೋಡ್ ಬಳಸಿ ವಿಮಾ ಪತ್ರದ ಅಸಲಿಯತ್ತನ್ನು ಖಾತರಿಪಡಿಸಿಕೊಳ್ಳಬೇಕು. ವಾಹನ ದಾಖಲೆ ತಪಾಸಣೆ ಸಂದರ್ಭ ವಿಮಾ ಪತ್ರವನ್ನು ಕ್ಯೂ ಆರ್ ಕೋಡ್‌ನಿಂದಲೇ ಪರಿಶೀಲಿಸಬೇಕು. ಅದಕ್ಕೆ ಬೇಕಾದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ ಮಾತನಾಡಿ, ನಕಲಿ ವಿಮೆ ಇರುವ ಬಗ್ಗೆ ದೂರು ಬಂದಿದ್ದು, ಸಂಶಯಿತ ಒಂದು ಕಡತವನ್ನು ತೆಗೆದಿರಿಸಿದ್ದೇವೆ. ನಕಲಿ ಆಗಿರುವ ವಿಚಾರ ತತ್‌ಕ್ಷಣ ನಮ್ಮ ಗಮನಕ್ಕೆ ಬರುವುದಿಲ್ಲ. ನಾವು ವಾಹನ ನೋಂದಣಿ ಮಾಡುವ ಸಂದರ್ಭ ವಿಮಾ ಪಾಲಿಸಿ ಸಂಖ್ಯೆ ಮತ್ತು ವಾಹನ ನಂಬರ್ ಅನ್ನು ಮಾತ್ರ ಹಾಕುತ್ತೇವೆ. ಒಂದು ತಿಂಗಳ ಹಿಂದೆ ವಿಮೆ ಮಾಡಲು ಕೇಂದ್ರ ಸರಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಆ ನಿಯಮದಲ್ಲಿ ನಕಲಿ, ವಂಚನೆ ಮಾಡಲು ಸಾಧ್ಯವಾಗುವುದಿಲ್ಲ. ಹಿಂದಿನ ವಿಮೆಗಳಲ್ಲಿ ಮಾತ್ರ ವಂಚನೆ ಆಗಿದೆ ಎಂದು ಹೇಳಿದರು.
ಯುನೆಟೈಡ್ ವಿಮಾ ಸಂಸ್ಥೆಯ ಯುನಿಟಿ ಅಧಿಕಾರಿ ರತ್ನಾವತಿ ರಂಜನ್ ಮಾತನಾಡಿ, ವಾಹನ ಖರೀದಿಸಿದ ಗ್ರಾಹಕನೋರ್ವ ವಿಮೆಯನ್ನು ತನ್ನ ಹೆಸರಿಗೆ ವರ್ಗಾಯಿಸಲೆಂದು ಯುನೈಟೈಡ್ ವಿಮಾ ಸಂಸ್ಥೆಯ ಮಂಗಳೂರಿನ ಕಚೇರಿಗೆ ಬಂದ ಸಂದರ್ಭದಲ್ಲಿ ಈ ನಕಲಿ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಿದರು.