ಪುತ್ತೂರು (ದ.ಕ): ಇಲ್ಲಿನ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಪಕ್ಕದ ಗದ್ದೆಯಲ್ಲಿ ಶಾಸಕ ಸಂಜೀವ ಮಠಂದೂರು ಉಳುಮೆ ಮಾಡಿ ಗಮನ ಸೆಳೆದಿದ್ದಾರೆ. ಆರ್ಯಾಪು ಗ್ರಾಮದ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಂಪ್ಯ ನವಚೇತನಾ ಯುವಕ ಮಂಡಲದ ಸಹಭಾಗಿತ್ವದಲ್ಲಿ ದಿ. ಉಗ್ಗಪ್ಪ ಗೌಡ ಅವರ ಹಡೀಲು ಬಿದ್ದ ಗದ್ದೆಯಲ್ಲಿ ‘ಗದ್ದೆಗೆ ಇಳಿಯೋಣ-ಬೇಸಾಯ ಮಾಡೋಣ’ ಅಭಿಯಾನ ನಡೆಯಿತು.
ಅಭಿಯಾನ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು, ಸ್ವತಃ ತಾವೇ ಗದ್ದೆಗೆ ಇಳಿದು, ನೇಗಿಲ ಹಿಡಿದು ಸಾಂಪ್ರದಾಯಿಕ ಶೈಲಿಯಲ್ಲಿ ಉಳುಮೆ ಮಾಡುವ ಮೂಲಕ ಚಾಲನೆ ನೀಡಿದರು. ಇವರ ಜೊತೆಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯರವರೂ ನೇಗಿಲ ಹಿಡಿದು ಸಾಂಪ್ರಾದಾಯಿಕ ಉಳುಮೆ ಮಾಡಿದರು.