ಪುತ್ತೂರು: ಮಂಗಳೂರಿನ ಕೂಳೂರಿನಲ್ಲಿ ಸೆ.2ರಂದು ನಡೆಯಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸುಮಾರು 10 ಸಾವಿರ ಮಂದಿ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ 15 ಸಾವಿರ ಮಂದಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ತೆರಳುವ ಫಲಾನುಭವಿಗಳಿಗೆ ವಾಹನ ಸೌಲಭ್ಯ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ತಾಲೂಕು ಹಾಗೂ ಜಿಲ್ಲಾಡಳಿತ ಮಾಡಲಿದೆ. ಪಕ್ಷದ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ವಾಹನ ಸೌಲಭ್ಯ ಹಾಗೂ ಊಟದ ವ್ಯವಸ್ಥೆಯನ್ನು ಪಕ್ಷದ ವತಿಯಿಂದ ಮಾಡಲಾಗುವುದು ಎಂದರು.
ಶುಕ್ರವಾರ ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿ ಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಬರುತ್ತಿದ್ದಾರೆ. ಜಿಲ್ಲೆಗೆ ನೀಡಿದ ಕೊಡುಗೆಗಳು ಹಾಗೂ ಸವಲತ್ತುಗಳ ಪ್ರಯೋಜನ ಪಡೆದ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಜಿಲ್ಲಾಡಳಿತ, ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಜನಪ್ರತಿನಿಧಿಗಳನ್ನು ಸೇರಿಕೊಂಡು ಕಾರ್ಯಕ್ರಮದ ಯಶಸ್ವಿಗಾಗಿ ಸಿದ್ಧತೆ ನಡೆದಿದೆ ಎಂದರು.
ಪ್ರತಿ ಬೂತ್ನಿಂದ ಕನಿಷ್ಠ ಒಂದು ಬಸ್ ಮಂದಿ ಪ್ರಧಾನಿಯವರ ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ. ಫಲಾನುಭವಿಗಳ ಹೊರತಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪ್ರತಿ ಬೂತ್ಗಳಿಂದ ಕನಿಷ್ಠ 1 ಬಸ್ನಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭಾಗವಹಿಸುವರು. ಒಟ್ಟು 220 ಬೂತ್ಗಳಿಂದ ಕನಿಷ್ಠ 15,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 15 ಸಾವಿರ ಮಂದಿಯನ್ನು ಕರೆದೊಯ್ಯಲು 75 ಖಾಸಗಿ ಬಸ್ಗಳು, 100 ಕೆಎಸ್ಆರ್ಟಿಸಿ ಬಸ್ಗಳು ಹಾಗೂ ಮಿನಿ ಬಸ್ಗಳನ್ನು ಬಳಸಲಾಗುವುದು. ಜತೆಗೆ ಸುಮಾರು 400ರಷ್ಟು ಖಾಸಗಿ ವಾಹನಗಳು ಇರಲಿವೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:ಸೆಪ್ಟೆಂಬರ್ 2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ