ಕರ್ನಾಟಕ

karnataka

ETV Bharat / state

ಬಡವರಿಗೆ ಸೂರು ಇಲ್ಲವಾದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಹೀನ.. ಶಾಸಕ ಸಂಜೀವ ಮಠಂದೂರು - ತಾಪಂ ಸದಸ್ಯರ ಸಾಮಾನ್ಯ ಸಭೆ

ಕಂದಾಯ ಇಲಾಖೆ, ಗ್ರಾಪಂಗಳು ಕಾದಿರಿಸಿದ ಜಾಗವನ್ನು ತಮ್ಮ ಜಾಗ ಎಂದು ಹೇಳಿಕೊಳ್ಳುವುದು ಬೇಡ. ಬಡ ವರ್ಗದ ಜನತೆಗೆ ಮನೆ ಕಟ್ಟಿಕೊಳ್ಳಲು ತೊಂದರೆ ಮಾಡಬೇಡಿ. ಸ್ವಲ್ಪ ಮಾನವೀಯತೆಯಿಂದ ವರ್ತಿಸಿ..

mla samjeeva matandoru talk about Build home for poor peoples
ಬಡವರಿಗೆ ಸೂರು ಇಲ್ಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಹೀನ, ಶಾಸಕ ಸಂಜೀವ ಮಠಂದೂರು

By

Published : Sep 29, 2020, 3:13 PM IST

ಪುತ್ತೂರು :ಸೂರಿಲ್ಲದ ಮಂದಿಗೆ ಒಂದು ಚಿಕ್ಕ ಸೂರು ಕಟ್ಟಿಕೊಳ್ಳಲು ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ ಎಂದಾದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವಿಲ್ಲ. ಜನಪ್ರತಿನಿಧಿಗಳು-ಅಧಿಕಾರಿಗಳು ಇದ್ದೂ ಪ್ರಯೋಜನವಿಲ್ಲ. ಅರಣ್ಯ ಇಲಾಖೆ ತಮ್ಮ ನಿಯಮಗಳನ್ನು ಸಡಿಲಿಕೆ ಮಾಡಿಕೊಂಡು ಬಡವರಿಗೆ ಮನೆ ಕಟ್ಟಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು.

ಬಡವರಿಗೆ ಸೂರು ಇಲ್ಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಹೀನ- ಶಾಸಕ ಮಠಂದೂರು

ಮಂಗಳವಾರ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುತ್ತೂರು ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಕೊಳ್ತಿಗೆ ಮತ್ತು ಒಳಮೊಗ್ರು ಗ್ರಾಮದ 19 ಮಂದಿಗೆ ಕಳೆದ 5 ವರ್ಷಗಳಿಂದ ಕಂದಾಯ ಇಲಾಖೆಯ ಹಕ್ಕು ಪತ್ರವಿದ್ದರೂ ಮನೆ ಕಟ್ಟಕೊಳ್ಳಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಸದಸ್ಯ ರಾಮ ಪಾಂಬಾರು ಹಾಗೂ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರು ಈ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.

ನಂತರ ಮಾತನಾಡಿದ ಶಾಸಕರು, ರಕ್ಷಿತಾರಣ್ಯ ಸಹಿತ ಅರಣ್ಯ ಇಲಾಖೆಯ ಜಾಗಗಳನ್ನು ನಿಮ್ಮ ಸರ್ವೆ ಅಧಿಕಾರಿಗಳ ಮೂಲಕ ಸರ್ವೆ ನಡೆಸಿ ಅರಣ್ಯ ಇಲಾಖೆಯ ಜಾಗಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. ಕಂದಾಯ ಇಲಾಖೆ, ಗ್ರಾಪಂಗಳು ಕಾದಿರಿಸಿದ ಜಾಗವನ್ನು ತಮ್ಮ ಜಾಗ ಎಂದು ಹೇಳಿಕೊಳ್ಳುವುದು ಬೇಡ. ಬಡ ವರ್ಗದ ಜನತೆಗೆ ಮನೆ ಕಟ್ಟಿಕೊಳ್ಳಲು ತೊಂದರೆ ಮಾಡಬೇಡಿ. ಸ್ವಲ್ಪ ಮಾನವೀಯತೆಯಿಂದ ವರ್ತಿಸಿ ಎಂದು ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಲಿಖಿತ ಪ್ರಶ್ನೆ-ಲಿಖಿತ ಉತ್ತರ :ತಾಪಂ ಸದಸ್ಯರು ತಾವು ಸಾಮಾನ್ಯ ಸಭೆಯಲ್ಲಿ ಕೇಳುವ ಪ್ರಶ್ನೆಗಳನ್ನು ಒಂದು ವಾರದ ಮುಂಚಿತ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಲಿಖಿತವಾಗಿ ನೀಡಬೇಕು. ಇದಕ್ಕೆ ಸರಿಯಾದ ಉತ್ತರವನ್ನು ಅಧಿಕಾರಿಗಳು ಲಿಖಿತ ರೂಪದಲ್ಲಿ ಸಾಮಾನ್ಯ ಸಭೆಯಲ್ಲಿ ನೀಡಬೇಕು. ಅಂತಹ ಕ್ರಮವೊಂದನ್ನು ಮುಂದಿನ ಹಂತದಲ್ಲಿಯೇ ಆರಂಭಿಸುವ ಮೂಲಕ ಸದಸ್ಯರ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ನೀಡುವ ಕ್ರಮ ಜಾರಿಗೊಳ್ಳಬೇಕು. ವಿಧಾನಸಭೆಯಲ್ಲಿ ಇರುವಂತಹ ಕ್ರಮವನ್ನು ತಾಪಂ ಸದನದಲ್ಲೂ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

94ಸಿ ಫಲಾನುಭವಿಗಳಿಗೆ ದಾನಿಗಳ ನೆರವು :ತಾಲೂಕಿನಲ್ಲಿ 94ಸಿ ಫಲಾನುಭವಿಗಳಿಗೆ ಹಣ ಕಟ್ಟಲು ತೊಂದರೆಯಾದವರಿಗೆ ದಾನಿಗಳ ನೆರವು ಪಡೆಯಲು ತಾಪಂ ಸದಸ್ಯರು ಶ್ರಮ ವಹಿಸಬೇಕು. ಕಂದಾಯ ಇಲಾಖೆಯ ಗ್ರಾಮಕರಣಿಕರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರತೀ ವಾರ ತಮ್ಮ ಪ್ರವಾಸದ ವಿವರಗಳನ್ನು ಕಚೇರಿ ಬಾಗಿಲಿಗೆ ಅಂಟಿಸಬೇಕು. ಇದರಿಂದ ಸಾರ್ವಜನಿಕರಿಗೆ ಪ್ರಯೋಜನವಾಗುತ್ತದೆ ಎಂದು ಶಾಸಕರು ಸೂಚಿಸಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ :ತಾಪಂ ಕ್ರಿಯಾ ಯೋಜನೆಯಲ್ಲಿ ಕ್ಷೇತ್ರವಾರು ಹಂಚಿಕೆಯಾದ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ನೆಟ್ಟಣಿಗೆ ಮುಡ್ನೂರು ಕ್ಷೇತ್ರಕ್ಕೆ ಇಡಲಾಗಿದ್ದ ರೂ.13 ಲಕ್ಷ ಬದಲಿಗೆ ಕೇವಲ 9 ಲಕ್ಷ ಮಾತ್ರ ನೀಡಲಾಗಿದೆ. ತಾಪಂ ಕ್ರಿಯಾಯೋಜನೆಯಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಸ್ವಷ್ಟವಾಗಿದೆ ಎಂದು ಸದಸ್ಯೆ ಫೌಝಿಯಾ ಆರೋಪಿಸಿದರು. ತಾನು ನೀಡಿದ್ದ ಹಲವಾರು ಕಾಮಗಾರಿಗಳನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಬದಲಾವಣೆಗೂ ಅವಕಾಶ ನೀಡಲಾಗಿಲ್ಲ. ಅಗತ್ಯದ ಕಾಮಗಾರಿಗಳನ್ನು ರದ್ದುಪಡಿಸಿರುವುದು ಸರಿಯಲ್ಲ. ಜನರಿಗೆ ನಾವು ಉತ್ತರಕೊಡಬೇಕಾಗಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಉತ್ತರಿಸಿದ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು, ತಾಪಂಗೆ ಬಂದ ₹2 ಕೋಟಿಯಲ್ಲಿ ₹50 ಲಕ್ಷ ಕಡಿತ ಮಾಡಲಾಗಿದೆ. ಹಾಗಾಗಿ, ಎಲ್ಲಾ ತಾಪಂ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿಯೂ ಕಡಿತವಾಗಿದೆ. ಆದರೆ, ಇದೀಗ ನೀಡಿದ ಕ್ರಿಯಾ ಯೋಜನೆಯಲ್ಲಿ ಬದಲಾವಣೆ ಮಾಡುವ ತಾಪಂ ಸದಸ್ಯರಿಗಾಗಿ ವಿಶೇಷ ಸಭೆಯೊಂದನ್ನು ಕರೆಯಲಾಗುವುದು ಎಂದು ತಿಳಿಸಿದರು.

ಅಕ್ಕಿ ಸಾಗಾಟ ಹಗರಣ- ಮರು ತನಿಖೆಗೆ ನಿರ್ಣಯ :ಬಿಪಿಎಲ್ ಪಡಿತರದಾರರಿಗೆ ಉಚಿತವಾಗಿ ಹಂಚಲು ತಂದಿದ್ದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿರುವ ಪ್ರಕರಣದ ಮರು ತನಿಖೆಗೆ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪುತ್ತೂರಿನಿಂದ ಮಂಗಳೂರಿಗೆ ಲಾರಿಯೊಂದರಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸಿದ್ದು, ಈ ಬಗ್ಗೆ ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಲಾಗಿತ್ತು. ಆದರೆ, 24 ಗಂಟೆಯಲ್ಲಿಯೇ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.

ಈ ಪ್ರಕರಣದಲ್ಲಿ ದೊಡ್ಡ ಜಾಲವೊಂದು ಕಾರ್ಯಾಚರಣೆ ಮಾಡುತ್ತಿರುವ ಶಂಕೆ ವ್ಯಕ್ತಪಡಿಸಿದ ಸದಸ್ಯರಾದ ಹರೀಶ್ ಬಿಜತ್ರೆ, ಮುಕುಂದ ಗೌಡ ಬಜತ್ತೂರು, ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರು ಸಮರ್ಪಕ ತನಿಖೆ ನಡೆಸುವಂತೆ ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ತಹಶೀಲ್ದಾರ್ ರಮೇಶ್ ಬಾಬು ಅವರು, ನ್ಯಾಯಬೆಲೆ ಅಂಗಡಿಯಿಂದ ಈ ಅಕ್ಕಿ ಸಾಗಾಟ ಮಾಡಿಲ್ಲ. ಪಡಿತರರದಾರರ ಕೈಯಿಂದ ಸಂಗ್ರಹಿಸಿ ಒಯ್ಯಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಮರು ತನಿಖೆಗೆ ಆಗ್ರಹಿಸಿ ತಾಪಂ ನಿರ್ಣಯ ಕೈಗೊಳ್ಳಲಾಯಿತು. ಎಎಸ್ಪಿ ಅವರಿಗೆ ಮನವಿ ನೀಡಲು ತೀರ್ಮಾನಿಸಲಾಯಿತು.

ABOUT THE AUTHOR

...view details