ಬಂಟ್ವಾಳ (ದಕ್ಷಿಣ ಕನ್ನಡ) : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಳೆದ ಶನಿವಾರ ಸಂಜೆ ಗ್ರಾಮವಿಕಾಸ ಯಾತ್ರೆ ಎಂಬ 13 ದಿನಗಳ ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ರೋಡ್ ಶೋ ಹಾಗೂ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಚುನಾವಣಾ ಪ್ರಚಾರಕ್ಕೆ ಬಳಸಿದ್ದ ವಾಹನವನ್ನೇ ಶಾಸಕ ನಾಯ್ಕ್ ಉಪಯೋಗಿಸುತ್ತಿದ್ದು, ಗಮನ ಸೆಳೆದಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪೊಳಲಿಯಲ್ಲಿ ಯಾತ್ರೆಗೆ ಚಾಲನೆ ನೀಡಿ, ಈ ಕಾರ್‌ನಲ್ಲಿ ರೋಡ್ ಶೋ ನಡೆಸಿದರು.
ಹೇಗಿದೆ ವಾಹನ?: ಆಂಧ್ರಪ್ರದೇಶದಲ್ಲಿ ತಯಾರಾಗಿರುವ ವಿನೂತನ ಮಾದರಿಯ ಪ್ರಚಾರದ ಎಸ್ ಕ್ಯಾಬ್ ವಾಹನವಿದು. ರಾತ್ರಿ ವೇಳೆ ನಡೆಯುವ ಬಹಿರಂಗಸಭೆಗೆ ಬೇಕಾದ ಫೋಕಸ್ ಲೈಟ್, ವಿದ್ಯುತ್, ಮೈಕ್ ಮತ್ತು ವಾಹನದ ಒಳಭಾಗದಲ್ಲಿ ಇಬ್ಬರಿಗೆ ಕುಳಿತುಕೊಳ್ಳಲು ಮತ್ತು ಹಿಂಬದಿಯಲ್ಲಿ ವೇದಿಕೆ ಮಾದರಿಯಲ್ಲಿದ್ದು ನಿಂತು ಭಾಷಣ ಮಾಡುವ ವ್ಯವಸ್ಥೆ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ರಾಜ್ಯ ಬಿಜೆಪಿಯ ಹಲವು ನಾಯಕರ ಭಾವಚಿತ್ರವನ್ನು ಪ್ರಚಾರದ ವಾಹನದಲ್ಲಿ ಅಂಟಿಸಲಾಗಿದೆ. ಜನವರಿ 14ರಿಂದ ಪೊಳಲಿಯಿಂದ ಆರಂಭಗೊಂಡ ರಾಜೇಶ್ ನಾಯ್ಕ್ ಅವರ ಗ್ರಾಮ ವಿಕಾಸ ಯಾತ್ರೆಯಲ್ಲಿ ಈ ವಿನೂತನ ವಾಹನವನ್ನು ಬಳಸಲಾಗುತ್ತಿದೆ. ಜನವರಿ 21ರ ಬಳಿಕ ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಇದೇ ಮಾದರಿಯಲ್ಲಿ ಮತ್ತೊಂದು ವಾಹನ ಬರಲಿದೆ ಎಂದು ಶಾಸಕರು ತಿಳಿಸಿದ್ದಾರೆ.