ಮಂಗಳೂರು/ಸೂರತ್ಕಲ್:ಕಳೆದ 50 ವರ್ಷಗಳಲ್ಲಿ ಯಾರೊಬ್ಬರೂ ಅಹವಾಲು ಆಲಿಸಲು ಹೆಜ್ಜೆ ಇಡದ ದ್ವೀಪ ಪ್ರದೇಶವಾದ ಬಡ್ಡ ಕುದ್ರುವಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ, ದೋಣಿಯಲ್ಲಿ ತೆರಳಿ ಅಲ್ಲಿನ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಮರಕಡ ವಾರ್ಡ್ 14 ರ ಬಡ್ಡಕುದ್ರುವಿಗೆ ಶಾಸಕ ಡಾ.ಭರತ್ ಶೆಟ್ಟಿ ಅವರು ದೋಣಿಯಲ್ಲಿ ಪ್ರಯಾಣಿಸಿ ದ್ವೀಪದ ಜನರ ಅಹವಾಲು ಆಲಿಸಿದ ಸಂದರ್ಭ ಮನವಿಗಳ ಮಹಾಪೂರ ಹರಿದು ಬಂತು. ಸದಾಶಿವ ಪೂಜಾರಿ ಎಂಬುವವರು ಶಾಸಕರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದರು. ಪಾಲಿಕೆ ಇದೀಗ ತ್ಯಾಜ್ಯ ತೆರಿಗೆ ಹಾಕಲಾಗುತ್ತಿದೆ. ಆದರೆ ಅವರು ಹೇಗೆ ತ್ಯಾಜ್ಯ ಸಂಗ್ರಹಿಸುತ್ತಾರೆ. ಬರಲು ವ್ಯವಸ್ಥೆಗಳಿಲ್ಲ. ನಮ್ಮಲ್ಲಿ ತ್ಯಾಜ್ಯವೂ ಸಂಗ್ರಹವಾಗುತ್ತಿಲ್ಲ. ತೆರಿಗೆ ಭಾರ ಮಾತ್ರ ತಪ್ಪದೆ ಹಾಕುತ್ತಾರೆ. ಇದನ್ನು ಸರಿಪಡಿಸಿ. ಪ್ರಥಮ ಬಾರಿ ಶಾಸಕರೊಬ್ಬರು ಭೇಟಿ ನೀಡಿ ಅಹವಾಲು ಆಲಿಸಿರುವುದಕ್ಕೆ ಸಂತಸವಾಗಿದೆ ಎಂದರು.