ಸುಳ್ಯ:ಎಂಪಿ ಮತ್ತು ಎಂಎಲ್ಎ ಜನಾದೇಶ ಪಡೆದು ಆರಿಸಿ ಬಂದಿದ್ದಾರೆ. ಅವರು ಮಾಡಬೇಕಾದ ಕೆಲಸ ಮಾಡದೇ ಕಾಂಗ್ರೆಸ್ ಪಕ್ಷ ಟೀಕಿಸುತ್ತಾ ಹಿಟ್ ಅಂಡ್ ರನ್ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಂಸದರೇ, ಶಾಸಕರೇ ನಾವು ನಿಮ್ಮನ್ನು ಟೀಕಿಸುವುದಿಲ್ಲ. ನೀವು ಕೂಡ ನಮ್ಮ ಪಕ್ಷ ದೂರುವ ಬದಲು ಕೆಲಸ ಮಾಡಿ ತೋರಿಸಿ ಎಂದು ಕಾಂಗ್ರೆಸ್ ಸವಾಲೊಡ್ಡಿದೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಮೊನ್ನೆ ಅಜ್ಜಾವರದಲ್ಲಿ ಶಾಸಕರು ಮತ್ತು ಸಂಸದರು ಕಾಂಗ್ರೆಸ್ ಟೀಕೆ ಮಾಡಿರೋದು ಗಮನಕ್ಕೆ ಬಂದಿದೆ. ಅವರು ಟೀಕೆ ಮಾಡುತ್ತಾರೆಂದು ನಾವು ಆ ರೀತಿ ಮಾಡಲು ಹೋಗುವುದಿಲ್ಲ. ಹಳ್ಳಿಯಿಂದ ದೆಹಲಿವರೆಗೆ ಅವರದೇ ಪಕ್ಷ ಆಡಳಿತದಲ್ಲಿದ್ರೂ ಅವರಿಗೆ ಕೆಲಸ ಮಾಡಲು ಸಾಧ್ಯವಾಗದೇ, ನಮ್ಮನ್ನು ದೂರಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸಕ, ಸಂಸದರಿಗೆ ವರ್ಷಕ್ಕೆ ಅವರ ಕ್ಷೇತ್ರಕ್ಕೆ ಬರುವ ಅನುದಾನ ತಂದದ್ದು ಬಿಟ್ಟರೆ ವಿಶೇಷ ಅನುದಾನ ತಂದಿದ್ದರೆ ಅದನ್ನು ಹೇಳಲಿ ಎಂದರು.