ಬಂಟ್ವಾಳ:ಕಳೆದ ವರ್ಷ ಐಕಳ ಎಂಬಲ್ಲಿ ನಡೆದ ಕಂಬಳದಲ್ಲಿ ಕೋಣಗಳೊಂದಿಗೆ 100 ಮೀಟರ್ ದೂರವನ್ನು 9.55 ಸೆಕೆಂಡ್ನಲ್ಲಿ ಕ್ರಮಿಸುವ ಮೂಲಕ ಕಂಬಳದ ಉಸೇನ್ ಬೋಲ್ಟ್ ಎಂಬ ಹೆಗ್ಗಳಿಕೆಗೆ ಮಿಜಾರು ಶ್ರೀನಿವಾಸ ಗೌಡ ಪಾತ್ರರಾಗಿದ್ದರು. ಆದ್ರೆ ಮಿಜಾರು ಶ್ರೀನಿವಾಸ ಗೌಡರಿಗೆ ಈ ಬಾರಿಯ ಸೀಸನ್ನ ಮೊದಲ ಹೊಕ್ಕಾಡಿಗೋಳಿಯ ವೀರವಿಕ್ರಮ ಕಂಬಳದಲ್ಲಿ ಅದೃಷ್ಟ ಕೈಕೊಟ್ಟಿದೆ.
ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದ ಕಂಬಳದ ದಾಖಲೆ ವೀರನಿಗೆ ಕೈಕೊಟ್ಟ ಅದೃಷ್ಟ 2020 ಫೆ.1ರಂದು ನಡೆದ ಐಕಳ ಕಂಬಳದಲ್ಲಿ 100 ಮೀಟರ್ ದೂರವನ್ನು ಶ್ರೀನಿವಾಸ ಗೌಡ 9.55 ಸೆಕೆಂಡ್ನಲ್ಲಿ ಕ್ರಮಿಸಿದ್ದರು. ಈ ಬಾರಿ ಹೊಕ್ಕಾಡಿಗೋಳಿಯಲ್ಲೂ ಅವರು ಅದೇ ವಿಶ್ವಾಸದಲ್ಲಿ ಹೊರಟಿದ್ದರು. ಆದರೆ ದುರದೃಷ್ಟವಶಾತ್ ಓಟದ ವೇಳೆ ಕರೆಯಲ್ಲಿ (ಕರೆ ಎಂದರೆ ಓಟದ ಜಾಗ) ಬಿದ್ದು ಗಾಯಗೊಂಡು ಪದಕವಂಚಿತರಾದರು.
ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ನೇಗಿಲು ಹಿರಿಯ ವಿಭಾಗದ ಕೋಣಗಳನ್ನು ಓಡಿಸುತ್ತಿರುವ ಸಂದರ್ಭ ಕೋಣಗಳು ಕರೆಯ ಮಧ್ಯಭಾಗದಿಂದ ಬಲ ಬದುವಿಗೆ ಸರಿದ ವೇಳೆ ಕೋಣ ಮತ್ತು ಬದು ಮಧ್ಯೆ ಸಿಲುಕಿದ ಶ್ರೀನಿವಾಸ ಗೌಡರು ಕರೆಯಲ್ಲಿ ಹೆಜ್ಜೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಧಾವಿಸಿದ ಪಾಣಿಲ ತಂಡದ ಬೆಂಬಲಿಗರು, ಗೌಡರನ್ನು ಮಂಜೊಟ್ಟಿಗೆ ಕರೆದೊಯ್ದರು.
2020ರ ಸೀಸನ್ ಕಂಬಳಗಳಲ್ಲಿ ಶ್ರೀನಿವಾಸ ಗೌಡ ಅವರು ಒಟ್ಟು 32 ಪದಕಗಳನ್ನು ಪಡೆದು ಹೊಸ ದಾಖಲೆ ಬರೆದಿದ್ದರು. ಅವರಿಗೆ ಈ ಬಾರಿ ತರಚಿದ ಗಾಯಗಳಾದ ಹಿನ್ನೆಲೆ ಗುಣಮುಖರಾಗುವ ವಿಶ್ವಾಸ ಇರುವ ಕಾರಣ, ಫೆ.6ರಂದು ಐಕಳದಲ್ಲಿ ನಡೆಯುವ ಕಾಂತಬಾರೆ, ಬೂದಬಾರೆ ಕಂಬಳದಲ್ಲಿ ಭಾಗವಹಿಸುವುದು ಖಚಿತವಾಗಿದೆ.
ವೈದ್ಯರ ಸಲಹೆ ಪಡೆದು ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.