ಮಂಗಳೂರು: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ವೇಳೆ ಹಿರಿಯ ಕಾಂಗ್ರೆಸ್ ಮುಖಂಡ, ನಿನ್ನೆಯಷ್ಟೆ ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸಿದ ಜನಾರ್ದನ ಪೂಜಾರಿ ಜೊತೆಗಿದ್ದದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಸಚಿವ ಯು. ಟಿ. ಖಾದರ್, ಬಿ. ರಮಾನಾಥ ರೈ, ಜೆಡಿಎಸ್ ಮುಖಂಡ, ಮಾಜಿ ಸಚಿವ ಅಮರನಾಥ್ ಶೆಟ್ಟಿ ಜತೆಗಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಯು. ಟಿ. ಖಾದರ್ ಜಿಲ್ಲೆಯ ಸರ್ವಜನಾಂಗದವರ ಧ್ವನಿಯನ್ನು ಲೋಕಸಭೆಯಲ್ಲಿ ಮಾತನಾಡಲು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಜನರನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಜಿಲ್ಲೆಯಲ್ಲಿ ಬದಲಾವಣೆ ತರಲು ಜನರು ಕೂಡ ಉತ್ಸಾಹದಲ್ಲಿದ್ದಾರೆ ಎಂದರು.
ಮಿಥುನ್ ರೈ ಗೆಲ್ಲದಿದ್ದರೆ ಮಂದಿರ, ಮಸೀದಿ, ಚರ್ಚ್ಗೆ ಹೋಗಲಾರೆ:
ದ.ಕ.ಜಿಲ್ಲಾ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಖಂಡಿತಾ ಜಯಗಳಿಸುತ್ತಾರೆ. ಒಂದು ವೇಳೆ ಮಿಥುನ್ ರೈ ಜಯಗಳಿಸದಿದ್ದರೆ ಕುದ್ರೋಳಿ ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುತ್ತೇನೆ. ಉಳ್ಳಾಲ ಮಸೀದಿಗೆ ಹೋಗುತ್ತಿದೆ ಅದನ್ನೂ ನಿಲ್ಲಿಸುತ್ತೇನೆ. ಚರ್ಚ್ಗೆ ಹೋಗುವುದನ್ನೂ ನಿಲ್ಲಿಸುತ್ತೇನೆ ಎಂದು ಕಾಂಗ್ರೆಸ್ ನ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ದ.ಕ.ಜಿಲ್ಲೆಯ ಜನ ನನ್ನ ಮೇಲೆ ಭರವಸೆ ಇಟ್ಟು, ನನ್ನನ್ನು ಈ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಈ ಜಿಲ್ಲೆಯೂ ನನ್ನ ಮನೆ ಇದ್ದ ಹಾಗೆ, ಇಲ್ಲಿಯ ಜನರು ನನ್ನ ಮನೆಯ ಸದಸ್ಯರಿದ್ದಂತೆ. ನಾನು ನನ್ನ ಕಡೆಯ ಉಸಿರಿರುವ ತನಕ ಈ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಹ ಕೆಲಸ ಮಾಡುವುದಿಲ್ಲ ಎಂದರು.