ಕರ್ನಾಟಕ

karnataka

ETV Bharat / state

ವಿಘ್ನೇಶ್ ನಾಯ್ಕ್ ಆತ್ಮಹತ್ಯೆ ಹಿಂದೆ ನರೇಶ್ ಶೆಣೈ ಕೈವಾಡವಿದೆಯೇ ಎಂಬುದು ತನಿಖೆಯಾಗಲಿ: ಮಿಥುನ್ ರೈ

ವಿಘ್ನೇಶ್ ನಾಯಕ್ ಅವರು ನರೇಶ್ ಶೆಣೈ ಅವರ ವಿವೇಕ್ ಟ್ರೇಡರ್ಸ್ ಎಂಬ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ವಿಘ್ನೇಶ್ ನಾಯಕ್ ಅವರ ಕ್ವಾಲಿಸ್ ಕಾರಿನಲ್ಲಿಯೇ ಹತ್ಯೆಗೆ ಸಂಚು ರೂಪಿಸಲಾಗಿತ್ತು..

By

Published : Nov 24, 2020, 7:24 PM IST

manglore
ಮಿಥುನ್ ರೈ

ಮಂಗಳೂರು :ಆರ್​​ಟಿಐ ವಿನಾಯಕ ಬಾಳಿಗ ಕೊಲೆ ಪ್ರಕರಣದ ಸಾಕ್ಷಿದಾರ ವಿಘ್ನೇಶ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೊಂದು ಪ್ರಚೋದನಾಕಾರಿ ಆತ್ಮಹತ್ಯೆಯೇ ಅಥವಾ ಇದರ ಹಿಂದೆ ಬಾಳಿಗ ಕೊಲೆ ಪ್ರಕರಣದ ಆರೋಪಿ ನರೇಶ್ ಶಣೈಯವರ ಕೈವಾಡವಿದೆಯೇ ಎಂಬುದು ತನಿಖೆಯಾಗಲಿ ಅಂತಾ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು.

ವಿಘ್ನೇಶ್ ನಾಯಕ್ ಆತ್ಮಹತ್ಯೆಯ ತನಿಖೆಗೆ ಆಗ್ರಹ..

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ನಗರ ಪೊಲೀಸ್ ಆಯುಕ್ತರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ವಿಘ್ನೇಶ್ ನಾಯಕ್ ಆತ್ಮಹತ್ಯೆಯ ಕುರಿತು ಕೂಲಂಕಷವಾಗಿ ತನಿಖೆ ನಡೆಸಲಿ ಎಂದು ಹೇಳಿದರು.

ವಿನಾಯಕ ಬಾಳಿಗ ಕೊಲೆ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ನರೇಶ್ ಶೆಣೈ ಹಾಗೂ ವಿಘ್ನೇಶ್ ನಾಯಕ್ ಅವರ ನಡುವೆ ಮನಸ್ತಾಪ ಇತ್ತು ಎಂಬ ವಿಚಾರವೂ ಕೇಳಿ ಬರುತ್ತಿದೆ. ಆದ್ದರಿಂದ ನರೇಶ್ ಶೆಣೈಯವರನ್ನು ವಿಚಾರಣೆಗೆ ಒಳಪಡಿಸಬೇಕು.

ನರೇಶ್ ಶೆಣೈ ಹಾಗೂ ವಿಘ್ನೇಶ್ ನಾಯಕ್ ಅವರ ಒಂದು ತಿಂಗಳ ದೂರವಾಣಿ ಕರೆಯನ್ನು ಬಹಿರಂಗಪಡಿಸಬೇಕು. ಅಲ್ಲದೆ ಅವರಿಬ್ಬರ ಕರೆ ದಾಖಲೆಗಳನ್ನು ಪೊಲೀಸರು ತನಿಖೆಗೊಳಪಡಿಸಬೇಕು.

ಜೊತೆಗೆ ವಿಘ್ನೇಶ್ ನಾಯಕ್ ಆತ್ಮಹತ್ಯೆಗೂ ನರೇಶ್ ಶೆಣೈಯವರಿಗೂ ಸಂಬಂಧ ಇದೆಯೇ ಎಂದು ಸ್ಪಷ್ಟವಾಗಬೇಕೆಂದು ಮಿಥುನ್ ರೈ ಹೇಳಿದರು.

2016 ರಲ್ಲಿ ನಡೆದಿರುವ ಆರ್​ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಹಲವು ಮಂದಿಯ ಮೇಲೆ ಎಫ್ಐಆರ್ ದಾಖಲಾಗುತ್ತದೆ. ಶಾಸಕ ವೇದವ್ಯಾಸ ಕಾಮತ್, ನರೇಶ್ ಶೆಣೈ ಹಾಗೂ ವಿಘ್ನೇಶ್ ನಾಯಕ್ ಹೆಸರು ಕೇಳಿ ಬಂದಿತ್ತು.

ವಿಘ್ನೇಶ್ ನಾಯಕ್ ಅವರು ನರೇಶ್ ಶೆಣೈ ಅವರ ವಿವೇಕ್ ಟ್ರೇಡರ್ಸ್ ಎಂಬ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ವಿಘ್ನೇಶ್ ನಾಯಕ್ ಅವರ ಕ್ವಾಲಿಸ್ ಕಾರಿನಲ್ಲಿಯೇ ಹತ್ಯೆಗೆ ಸಂಚು ರೂಪಿಸಲಾಗಿತ್ತು.

ಹತ್ಯೆ ನಡೆಸಲೂ ಈ ಕಾರನ್ನು ಬಳಸಲಾಗಿತ್ತು. ಆ ಬಳಿಕ ಆ ಕಾರು ನರೇಶ್ ಶೆಣೈಯವರದ್ದು ಎಂಬ ಮಾತೂ ಕೇಳಿ ಬಂದಿತ್ತು. ವಿನಾಯಕ ಬಾಳಿಗ ಕೊಲೆ ಪ್ರಕರಣದ ಬಳಿಕ ನರೇಶ್ ಶಣೈ ತಲೆಮರೆಸಿಕೊಂಡಾಗ, ವಿಘ್ನೇಶ್ ನಾಯಕ್ ಅವರು ಕೂಡ ಸ್ವಲ್ಪ ಕಾಲ ಊರಲ್ಲಿ‌ ಇರಲಿಲ್ಲ. ಬಳಿಕ‌ ತನಿಖೆ ನಡೆದ ಸಂದರ್ಭದಲ್ಲಿ ವಿಘ್ನೇಶ್ ನಾಯಕ್ ಅವರನ್ನು ಸಾಕ್ಷಿಯೆಂದು ನ್ಯಾಯಾಲಯ ಪರಿಗಣಿಸಿತ್ತು ಎಂದು ಹೇಳಿದರು.

ವಿಘ್ನೇಶ್ ನಾಯಕ್ ಅವರ ಮದುವೆ ಕೂಡಾ ನಿಗದಿಯಾಗಿದ್ದು, ಈ ಸಂದರ್ಭದಲ್ಲಿ ಅವರು ಯಾಕೆ ಆತ್ಮಹತ್ಯೆ ಮಾಡುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ವಿನಾಯಕ ಬಾಳಿಗ ಕೊಲೆ ಪ್ರಕರಣದ ಸಾಕ್ಷಿದಾರರಾಗಿರುವ ವಿಘ್ನೇಶ್ ನಾಯಕ್ ಆತ್ಮಹತ್ಯೆಗೆ ಶರಣಾಗಿದ್ದು, ಉಳಿದ ಸಾಕ್ಷಿದಾರರಿಗೂ ಜೀವ ಬೆದರಿಕೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ವಿನಾಯಕ ಬಾಳಿಗ ಸೋದರಿಗೂ ಕೊಲೆ ಬೆದರಿಕೆ ಇದೆ. ಆದ್ದರಿಂದ ವಿನಾಯಕ ಬಾಳಿಗ ಕೊಲೆ ಪ್ರಕರಣದ ಎಲ್ಲಾ ಸಾಕ್ಷಿದಾರರುಗಳಿಗೂ ಪೊಲೀಸ್ ಆಯುಕ್ತರು ಪೊಲೀಸ್ ರಕ್ಷಣೆ ನೀಡಬೇಕು. ಜೊತೆಗೆ ವಿನಾಯಕ ಬಾಳಿಗ ಕೊಲೆ ಪ್ರಕರಣವನ್ನು ಮಗದೊಮ್ಮೆ ತನಿಖೆ ನಡೆಸಬೇಕು ಎಂದು ಮಿಥುನ್ ರೈ ಮನವಿ ಮಾಡಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ವಿಘ್ನೇಶ್ ನಾಯಕ್ ಆತ್ಮಹತ್ಯೆ ಬಳಿಕ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಸಂಶಯ ಮೂಡುತ್ತಿದೆ. ಆದ್ದರಿಂದ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಸ್ಪಷ್ಟವಾಗಬೇಕು.

ಆತ್ಮಹತ್ಯೆಗೂ ಪ್ರಚೋದನೆ ಅಥವಾ ಒತ್ತಡಗಳು ಇದ್ದಲ್ಲಿ ಅದೂ ಅಪರಾಧವೇ.. ಪೊಲೀಸರು ವಿನಾಯಕ ಬಾಳಿಗ ಕೊಲೆ ಪ್ರಕರಣವನ್ನು ಇಷ್ಟು ದೀರ್ಘಕಾಲ ಕೊಂಡೊಯ್ಯಬಾರದಿತ್ತು. ಸಂಪೂರ್ಣ ತನಿಖೆಯಾಗಿ ಸ್ಪಷ್ಟ ಸತ್ಯ ಹೊರಬರಬೇಕಿತ್ತು.

ಇನ್ನೂ ಸಾರ್ವಜನಿಕರಲ್ಲಿ ಈ ಬಗ್ಗೆ ಸಂಶಯವಿದ್ದು, ಸಾಕ್ಷಿದಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದರೆ ನಮಗೆ ಸಂತೋಷ. ಅವರಿಗೆ ಒತ್ತಡವಿದ್ದಲ್ಲಿ ಸಿಬಿಐ ಅಥವಾ ಸಿಒಡಿ ಕೂಲಂಕಷವಾಗಿ ನಿಷ್ಪಕ್ಷಪಾತವಾದ ತನಿಖೆ ನಡೆಸಲಿ ಎಂದು ಹೇಳಿದರು.

ABOUT THE AUTHOR

...view details