ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾದ ಒಂದೇ ಫ್ಲ್ಯಾಟ್ನ ನಾಲ್ವರ ಮಕ್ಕಳು ಪತ್ತೆಯಾಗಲು ಕಾರಣರಾದ ಆಟೋ ಚಾಲಕರಿಬ್ಬರು ಮಕ್ಕಳು ಪತ್ತೆಯಾದ ಸಂದರ್ಭವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಾಪತ್ತೆಯಾದ ಮಕ್ಕಳ ಪತ್ತೆಗೆ ಸಹಕರಿಸಿದ ಆಟೋ ಚಾಲಕರು ಬೆಂಗಳೂರಿನಿಂದ ಮನೆ ಬಿಟ್ಟು ಬೆಳಗಾವಿ, ಮೈಸೂರು ಸುತ್ತಿ ಇಂದು ಬೆಳಗ್ಗೆ 7.30 - 8 ಗಂಟೆ ಸುಮಾರಿಗೆ ಬಲ್ಮಠದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಂದಿಳಿದಿದ್ದಾರೆ. ಆಗ ಆ ಮಕ್ಕಳನ್ನು ನೋಡಿದ ಆಟೋ ಡ್ರೈವರ್ಗಳಿಬ್ಬರಿಗೆ ಅನುಮಾನ ಮೂಡಿದೆ. ಅದೇ ವೇಳೆ ಮಕ್ಕಳು ಅಲ್ಲಿ ಯಾರದೋ ಬಳಿ ಲಾಡ್ಜ್ ಬಗ್ಗೆ ವಿಚಾರಿಸಿದ್ದಾರೆ. ಆಗ ಅವರ ಅನುಮಾನ ಬಲವಾಗಿದೆ. ಆಗಲೇ ಅವರು ಪೇಪರ್ ಖರೀದಿಸಿ ವರದಿ ನೋಡಿದ್ದಾರೆ. ಅದರಲ್ಲಿದ್ದ ಫೋಟೋ ಮತ್ತು ಮಕ್ಕಳಲ್ಲಿ ಸಾಮ್ಯತೆ ಕಂಡು ಅವರನ್ನು ವಿಚಾರಿಸಿದ್ದಾರೆ.
ಇದನ್ನೂ ಓದಿ:ಮಕ್ಕಳು ನಾಪತ್ತೆ ಪ್ರಕರಣ: ಓರ್ವ ಯುವತಿ ಸೇರಿ ನಾಲ್ವರು ಮಂಗಳೂರಿನಲ್ಲಿ ಪತ್ತೆ
ಈ ಬಗ್ಗೆ ಆಟೋ ರಿಕ್ಷಾ ಚಾಲಕ ಪ್ರಶಾಂತ್ ಮಾತನಾಡಿ, ಬಸ್ನಿಂದ ಇಳಿದ ಮಕ್ಕಳು ಗಾಬರಿಯಿಂದ ಅತ್ತಿಂದಿತ್ತ ಓಡಾಡುತ್ತಿದ್ದರು. ಹಾಗಾಗಿ ನಾನು ಮತ್ತು ಮತ್ತೋರ್ವ ಆಟೋ ಡ್ರೈವರ್ ರಮೇಶ್ ಹೋಗಿ ಮಕ್ಕಳಲ್ಲಿ ವಿಚಾರಿಸಿದ್ದೇವೆ. ಆದರೆ ಸರಿಯಾಗಿ ಅವರಿಂದ ಉತ್ತರ ಬಂದಿಲ್ಲ. ಅಲ್ಲಿ ಯಾವುದೇ ಪೊಲೀಸರು ಇರಲಿಲ್ಲ. 112ಗೆ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಆದ್ದರಿಂದ ಮಕ್ಕಳನ್ನು ಆಟೋದಲ್ಲಿ ಕೂರಿಸಿಕೊಂಡು ನೇರ ಪಾಂಡೇಶ್ವರ ಠಾಣೆಗೆ ಕರೆತಂದಿದ್ದೇವೆ ಎಂದು ತಿಳಿಸಿದ್ದಾರೆ.
ರಿಕ್ಷಾ ಚಾಲಕ ರಮೇಶ್ ಮಾತನಾಡಿ, ಮಕ್ಕಳನ್ನು ಆಟೋದಲ್ಲಿ ಕೂರಿಸಿ ಲಾಡ್ಜ್ಗೆ ಕರೆದೊಯ್ಯುತ್ತೇವೆ ಎಂದು ಹೇಳಿ ನೇರವಾಗಿ ಪಾಂಡೇಶ್ವರ ಠಾಣೆಗೆ ಕರೆತಂದು ಪೊಲೀಸರ ಸುಪರ್ದಿಗೆ ಸುರಕ್ಷಿತವಾಗಿ ಒಪ್ಪಿಸಿದ್ದೇವೆ ಎಂದರು.