ಮಂಗಳೂರು : ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕೃತಗೊಂಡ ವಿಚಾರದಲ್ಲಿ ಕೇರಳ ಸರ್ಕಾರವು ಗೊಂದಲ ಸೃಷ್ಟಿಸಿದ್ದು, ರಾಜ್ಯ ಕಾಂಗ್ರೆಸ್ ಇದನ್ನು ವಿನಾಕಾರಣ ವೈಭವೀಕರಿಸುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೂ ಪ್ರಧಾನಿ ಮೋದಿಯವರು, ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಮಂಗಳೂರಿನಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಸರ್ಕಾರದ ಮಾಜಿ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಈ ವಿಚಾರದಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ. ಇದೇ ವಿಚಾರವನ್ನು ಹಿಡಿದುಕೊಂಡು ರಾಜ್ಯ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ ಎಂದರು.
ಕೇರಳದ ಶಿವಗಿರಿಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಮಠವನ್ನು ಸ್ವಾಧೀನ ಪಡಿಸಿಕೊಂಡು ಅಲ್ಲಿನ 24 ಸನ್ಯಾಸಿಗಳನ್ನು ಕೇರಳದ ಎಡಪಂಥೀಯರು ಬೀದಿಗಟ್ಟಿದ್ದರು. ಈಗ ಅವರೇ ವಿನಾಕಾರಣ ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಸ್ತಬ್ಧಚಿತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬದಲಿಗೆ ಶಂಕರಾಚಾರ್ಯರ ಪ್ರತಿಮೆ ಇರಿಸುವಂತೆ ಕೇಂದ್ರ ಸರ್ಕಾರ ಹೇಳಿರುವುದಕ್ಕೆ ಆಧಾರಗಳಿದ್ದರೆ ನೀಡಲಿ ಎಂದು ಸಚಿವರು ಹೇಳಿದರು.
ಸ್ತಬ್ಧಚಿತ್ರ ವಿಚಾರವಾಗಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಅವರಿಗೆ ವಸ್ತುಸ್ಥಿತಿ ವಿವರಿಸಿದ್ದೇವೆ. ಅವರು ಕೈಗೊಳ್ಳುವ ಎಲ್ಲಾ ಸದುದ್ದೇಶದ ಕಾರ್ಯಗಳಿಗೆ ನಮ್ಮ ಬೆಂಬಲ ಸೂಚಿಸಿದ್ದೇವೆ ಎಂದರು.
ಜ.26ರಂದು ಅವರು ಹಮ್ಮಿಕೊಂಡಿರುವ ಗುರುಗಳ ಭಾವಚಿತ್ರ ಸಹಿತ ಮೆರವಣಿಗೆಗೆ ಬೆಂಬಲ ನೀಡಿದ್ದೇವೆ. ಈ ವೇಳೆ ನಮ್ಮ ಮಾತುಗಳನ್ನು ಪೂಜಾರಿ ಅವರು ಆಲಿಸಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ನುಸುಳದಂತೆ ನೋಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ